ನವದೆಹಲಿ(ಪಿಟಿಐ): ಗುಜರಾತ್‌ನ ಮುಂದ್ರಾ, ಹಜೀರಾ ಮತ್ತು ದಹೇಜ್ ಬಂದರುಗಳನ್ನು ‘ನಿಯಂತ್ರಣ’ಕ್ಕೆ ತೆಗೆದುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಅದಾನಿ ಪೋರ್ಟ್ಸ್ ಕಂಪನಿಗೆ ‘ರಿಯಾಯಿತಿ’ಗಳನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
‘ನಿರ್ಮಾಣ–ನಿರ್ವಹಣೆ–ಮಾಲೀಕತ್ವ ಹಾಗೂ ವರ್ಗಾವಣೆ’ (ಬಿಒಒಟಿ–ಬೂಟ್) ಆಧಾರದಲ್ಲಿ ಈ ಬಂದರುಗಳ ನಿಯಂತ್ರಣವನ್ನು 75 ವರ್ಷಗಳ ಅವಧಿಗೆ ನೀಡಲಾಗಿದೆ. ‘ಬೂಟ್ ಎಂಬುದು ಲೂಟ್’ ಆಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಂದರು ಕ್ಷೇತ್ರದಲ್ಲಿ ಅದಾನಿ ಪೋರ್ಟ್ಸ್ ಏಕಸ್ವಾಮ್ಯ ಹೊಂದುವುದಕ್ಕೆ ಗುಜರಾತ್ ಸರ್ಕಾರ ನೆರವಾಗುತ್ತಿದೆ’ ಎಂದು ಆರೋಪಿಸಿ ಆಗಸ್ಟ್‌ನಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
‘ಬಿಒಒಟಿ ಆಧಾರದಲ್ಲಿ ಬಂದರುಗಳ ನಿರ್ವಹಣೆಗೆ ನೀಡಲಾಗಿದ್ದ ಅವಧಿಯನ್ನು 30 ವರ್ಷಗಳಿಂದ 75 ವರ್ಷಗಳಿಗೆ ವಿಸ್ತರಿಸುವಂತೆ ಕೋರಿ ಇದೇ ವರ್ಷ ಅದಾನಿ ಪೋರ್ಟ್ಸ್, ಗುಜರಾತ್ ಕಡಲಯಾನ ಮಂಡಳಿ (ಜಿಎಂಬಿ)ಗೆ ಮನವಿ ಮಾಡಿತ್ತು. ಯಾವುದೇ ಬಂದರಿನ ನಿರ್ವಹಣೆ ಗುತ್ತಿಗೆಯನ್ನು ಗರಿಷ್ಠ 50 ವರ್ಷಗಳ ವರೆಗೆ ನೀಡುವುದಕ್ಕೆ ಅವಕಾಶ ಇದೆ. ಆದರೆ, ಅದಾನಿ ಪೋರ್ಟ್ಸ್‌ಗೆ ನೀಡಿರುವ ರಿಯಾಯಿತಿ ಈ ಮಿತಿಯನ್ನು ಮೀರಲಿದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಆರೋಪಗಳನ್ನು ತಳ್ಳಿ ಹಾಕಿರುವ ಅದಾನಿ ಸಮೂಹ, ಕಾನೂನು ಪ್ರಕಾರವೇ ಗುತ್ತಿಗೆ ಪಡೆದಿರುವುದಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.