ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭದ್ರತೆ ಮತ್ತು ಭಯ ಕಾಡುತ್ತಿರುವುದರಿಂದಲೇ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ‘ಕೆಟ್ಟ ರೀತಿಯ’ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಲೋಕಸಭೆಯಲ್ಲಿ ಸೋಮವಾರ ಭಾಷಣದ ವೇಳೆ ಮೋದಿ ಅವರು ನೆಹರು ವಿರುದ್ಧ ಟೀಕೆ ಮಾಡಿದ್ದರು. ‘ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಅವರಂತಹ ಹಿರಿಯ ನಾಯಕರು ಕೂಡಾ ನೆಹರು ಬಗ್ಗೆ ಈ ರೀತಿಯ ಮಾತುಗಳನ್ನಾಡಿರಲಿಲ್ಲ. ಆದರೆ ಮೋದಿ ಅವರು ಕೆಟ್ಟ ಅಭಿರುಚಿಯ ಟೀಕೆಯ ಮೂಲಕ ತಮ್ಮ ಉನ್ನತ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಹೇಳಿದ್ದಾರೆ.
‘ಮೋದಿ ಅವರು ತಮ್ಮನ್ನು ತಾವು ಬುದ್ಧಿವಂತ ಎಂದು ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ಅವರು ಹೊಂದಿರುವ ಹುದ್ದೆಯನ್ನು ಅವಮಾನಿಸುತ್ತಿದ್ದಾರೆ. ಸ್ವಪ್ರತಿಷ್ಠೆ ಮತ್ತು ನೆಹರು ಫೋಬಿಯಾದ ವಿಷಕಾರಿ ಮಿಶ್ರಣವು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತಿದೆ’ ಎಂದು ‘ಎಕ್ಸ್’ ಖಾತೆಯಲ್ಲಿ ಎಚ್ಚರಿಸಿದ್ದಾರೆ.
‘ದೇಶದ ಜನರು, ಅದರಲ್ಲೂ ಮುಖ್ಯವಾಗಿ ಯುವಕರು, ಮೋದಿ ಅವರು ಪ್ರಧಾನಿಯಾಗಿ ಲೋಕಸಭೆಯಲ್ಲಿ ಮಾಡಿದ ಕೊನೆಯ ಭಾಷಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. 10 ವರ್ಷಗಳ ಅನ್ಯಾಯದ ಕಾಲ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.