ಮಹೇಂದ್ರಗಢ: ‘ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಹರಿಯಾಣದ ಮಹೇಂದ್ರಗಢದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬ್ಯಾಕ್‌ವರ್ಡ್ ಕ್ಲಾಸಸ್ ಸಮ್ಮಾನ್ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲು 1950ರಲ್ಲಿ ಕಾಕಾ ಕಾಲೇಲ್ಕರ್ ಆಯೋಗವು ರಚನೆಗೊಂಡಿತು. ಆದರೆ ಕಾಂಗ್ರೆಸ್ ಪಕ್ಷವು ಅದನ್ನು ಹಲವು ವರ್ಷಗಳ ಕಾಲ ಅನುಷ್ಠಾನಗೊಳಿಸಲಿಲ್ಲ. 1980ರಲ್ಲಿ ಮಂಡಲ ಆಯೋಗದ ವರದಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ನೇಪಥ್ಯಕ್ಕೆ ಸೇರಿಸಿದರು. 1990ರಲ್ಲಿ ವರದಿಯನ್ನು ಒಪ್ಪಿಕೊಂಡಾಗ, ರಾಜೀವ್ ಗಾಂಧಿ ಅವರು ಒಬಿಸಿ ಮೀಸಲಾತಿ ವಿರುದ್ಧ ಎರಡೂವರೆ ಗಂಟೆ ಭಾಷಣ ನೀಡಿದರು’ ಎಂದರು.
‘ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ನೀಡಲಾಗಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಕಸಿದು ಮುಸ್ಲಿಮರಿಗೆ ನೀಡಿದೆ. ಹರಿಯಾಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದನ್ನೇ ಇಲ್ಲಿಯೂ ಮಾಡಲಿದೆ. ಆದರೆ ಬಿಜೆಪಿ ಎಂದಿಗೂ ಅದಕ್ಕೆ ಅವಕಾಶ ನೀಡುವುದಿಲ್ಲ. ಹಿಂದುಳಿದ ವರ್ಗಗಳ ಹಕ್ಕುಗಳನ್ನು ನಾವು ಸದಾ ಕಾಪಾಡುತ್ತೇವೆ’ ಎಂದು ಶಾ ಹೇಳಿದರು.
‘ನಮ್ಮ ಸರ್ಕಾರ ದಲಿತ, ಬಡವ ಹಾಗೂ ಹಿಂದುಳಿದವರ ಪರ ಎಂದು 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಬಾರಿ ಕೇಂದ್ರ ಸರ್ಕಾರದಲ್ಲಿ 27 ಮಂತ್ರಿಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಅವರಲ್ಲಿ ಇಬ್ಬರು ಹರಿಯಾಣಕ್ಕೆ ಸೇರಿದವರು. ಅದೇ ವಿಶ್ವಾಸದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚಿಸಲಿದೆ. ಅದಕ್ಕಾಗಿ ಹಿಂದುಳಿದ ವರ್ಗಗಳು ಮತ ಹಾಕಬೇಕಿದೆ’ ಎಂದು ಮನವಿ ಮಾಡಿದರು.
ರಾಜ್ಯದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಹಿಂದುಳಿದ ವರ್ಗಗಳ ಪರವಾಗಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಹಿಂದುಳಿದ ವರ್ಗಗಳ ಜನರಿಗೆ ವಾರ್ಷಿಕ ಆದಾಯ ಮಿತಿಯನ್ನು ₹6ಲಕ್ಷದಿಂದ ₹8ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಎ ಶ್ರೇಣಿಯ ಸರ್ಕಾರಿ ಹುದ್ದೆಗಳಿಗೆ ಈ ಮೊದಲು ಶೇ 8ರಷ್ಟು ಮೀಸಲಾತಿ ಇತ್ತು. ಇದಕ್ಕೆ ಹೆಚ್ಚುವರಿಯಾಗಿ ಶೇ 5ರಷ್ಟನ್ನು ಬಿ ಶ್ರೇಣಿಯ ಹುದ್ದೆಗಳಿಗೆ ನೀಡಲಾಗಿದೆ. ನಗರಸಭೆಯಲ್ಲೂ ಶೇ 5ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ಶೇ 8ರಷ್ಟು ಮೀಸಲಾತಿ ಇದ್ದೇ ಇದೆ’ ಎಂದು ಹೇಳಿದರು.
‘ನಾನು ಬನಿಯಾ ಸಮುದಾಯಕ್ಕೆ ಸೇರಿದವನು. ಪ್ರತಿ ಪೈಸೆಯ ಲೆಕ್ಕವನ್ನೂ ಇಡುತ್ತೇನೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ಅವರ 10 ವರ್ಷಗಳ ದುರಾಡಳಿತದ ಪ್ರತಿ ಪೈಸೆಯ ಲೆಕ್ಕವನ್ನೂ ಕೇಳುತ್ತೇನೆ. ನೇಮಕಾತಿಯಲ್ಲಿ ಭ್ರಷ್ಟಾಚಾರ, ಎಲ್ಲೆಡೆ ಜಾತಿ, ತಾರತಮ್ಯ, ಸ್ವಜನಪಕ್ಷಪಾತ ಇವೆಲ್ಲದಕ್ಕೂ ಲೆಕ್ಕ ನೀಡಬೇಕು ನೀವು. ಈ ದುರಾಡಳಿತದ ಲೆಕ್ಕವನ್ನು ನಾವು ಜನರ ಮುಂದಿಡುತ್ತೇವೆ. ನಂತರ ಕಾಂಗ್ರೆಸ್‌ನಿಂದ ಲೆಕ್ಕ ಕೇಳುತ್ತೇವೆ’ ಎಂದು ಶಾ ಗುಡುಗಿದರು.
ಸಮಾವೇಶದಲ್ಲಿ ಸೈನಿ, ಕೇಂದ್ರ ಸಚಿವರಾದ ರಾವ್ ಇಂದ್ರಜಿತ್ ಸಿಂಗ್, ಕೃಷ್ಣ ಪಾಲ್ ಗುರ್ಜರ್ ಹಾಗೂ ಧರ್ಮೇಂದ್ರ ಪ್ರಧಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.