ಹೈದರಾಬಾದ್: ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರ ಗುರುವಾರ 2024–25ನೇ ಸಾಲಿನ ತನ್ನ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದು, ಕೃಷಿ ಕ್ಷೇತ್ರ ಹಾಗೂ ರೈತರ ಸಾಲ ಮನ್ನಾ ಯೋಜನೆಗೆ ಸಿಂಹಪಾಲು ಹಂಚಿಕೆ ಮಾಡಲಾಗಿದೆ.
ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ₹2,91,150 ಕೋಟಿ ಗಾತ್ರದ ಬಜೆಟ್ ಮಂಡಿಸಿದರು.
ಕೃಷಿ ಇಲಾಖೆಗೆ ₹72,659 ಕೋಟಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಕೆಲ ದಿನಗಳ ಹಿಂದೆ ಘೋಷಿಸಿರುವ ರೈತರ ಕೃಷಿ ಸಾಲ ಮನ್ನಾ ಯೋಜನೆಗೆ ₹31 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವ ವಿಕ್ರಮಾರ್ಕ ಹೇಳಿದರು.
ಚುನಾವಣೆ ವೇಳೆ ಘೋಷಿಸಿದ್ದ ಆರು ಗ್ಯಾರಂಟಿ ಯೋಜನೆಗಳಿಗೂ ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದ್ದು, ₹500ಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಯೋಜನೆಗೆ ₹ 723 ಕೋಟಿ ಮೀಸಲಿರಿಸಲಾಗಿದೆ.
200 ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್ ಪೂರೈಸುವ ಗೃಹ ಜ್ಯೋತಿ ಯೋಜನೆಗೆ ₹2,418 ಕೋಟಿ ಒದಗಿಸಲಾಗಿದೆ.
ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿರುವ ರಾಜ್ಯ ಸರ್ಕಾರ, ಈ ವರೆಗೆ ಈ ಯೋಜನೆಗಾಗಿ ₹2,351 ಕೋಟಿ ವೆಚ್ಚ ಮಾಡಿದೆ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.