ADVERTISEMENT

ರಾಜ್ಯಸಭೆಯಲ್ಲಿ ಪೂರ್ಣ ಹಾಜರಾತಿಗೆ ಕಾಂಗ್ರೆಸ್‌ ವಿಪ್‌; ಪ್ರಮುಖ ವಿಚಾರದತ್ತ ಚಿತ್ತ

ಪಿಟಿಐ
Published 15 ಡಿಸೆಂಬರ್ 2021, 4:38 IST
Last Updated 15 ಡಿಸೆಂಬರ್ 2021, 4:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬುಧವಾರ ಸದನಕ್ಕೆ ಹಾಜರಾಗಬೇಕೆಂದು ಕಾಂಗ್ರೆಸ್ ತನ್ನೆಲ್ಲ ರಾಜ್ಯಸಭಾ ಸದಸ್ಯರಿಗೆ ಮಂಗಳವಾರ ವಿಪ್ ಜಾರಿ ಮಾಡಿದೆ.

'ಬುಧವಾರ ರಾಜ್ಯಸಭೆಯಲ್ಲಿ ಪ್ರಮುಖ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು. ಹಾಗಾಗಿ, ಕಾಂಗ್ರೆಸ್ ಪಕ್ಷದ ಎಲ್ಲ ರಾಜ್ಯಸಭಾ ಸದಸ್ಯರು 11 ಗಂಟೆಯಿಂದ ಕಲಾಪ ಮುಂದೂಡುವವರೆಗೆ ಸದನದಲ್ಲಿ ಹಾಜರಿರಬೇಕು. ಯಾವುದೇ ಕಾರಣಕ್ಕೂ ಗೈರಾಗಬಾರದು ಮತ್ತು ಪಕ್ಷದ ನಿಲುವಿಗೆ ಬೆಂಬಲ ಸೂಚಿಸಬೇಕು' ಎಂದು ಪಕ್ಷದ ಮುಖ್ಯ ಸಚೇತಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಸಂಸತ್ತಿನ ಮೇಲ್ಮನೆಯು ಬುಧವಾರ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ತಿದ್ದುಪಡಿ) ಕಾಯ್ದೆ ಮತ್ತು ಸಾಂಕ್ರಾಮಿಕ ರೋಗದ ಈಗಿನ ಸ್ಥಿತಿಗತಿ ಕುರಿತು ಚರ್ಚೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ADVERTISEMENT

ಮಂಗಳವಾರವಷ್ಟೇ ಸದನದಿಂದ ಹೊರನಡೆದಿದ್ದ ಕಾಂಗ್ರೆಸ್, ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಿರುವ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಚುರುಕುಗೊಳಿಸಲು ಸಿದ್ಧತೆ ಮಾಡಿಕೊಂಡಿದೆ.

ರಾಜ್ಯಸಭೆಯ 12 ಸದಸ್ಯರ ಅಮಾನತು ಹಿಂಪಡೆಯಬೇಕು ಎಂದು ಹಲವು ವಿರೋಧ ಪಕ್ಷಗಳು ಒಕ್ಕೊರಲಿನಿಂದ ಒತ್ತಾಯಿಸುತ್ತಿವೆ. ಆದರೆ, ಅವರು ಮೊದಲು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಸರ್ಕಾರ ಪಟ್ಟುಹಿಡಿದಿದೆ. ಹೀಗಾಗಿ ವಿರೋಧ ಪಕ್ಷಗಳು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕೈಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.