ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳಲ್ಲಿ 70ರಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಿಳಿಸಿದ್ದಾರೆ.
ಉಳಿದ 11 ಕ್ಷೇತ್ರಗಳಲ್ಲಿ ಆರ್‌ಜೆಡಿ ಮತ್ತು ಎಡ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ ಎಂದು ಶನಿವಾರ ತಿಳಿಸಿದ್ದಾರೆ.
‘ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಜಾರ್ಖಂಡ್‌ನಲ್ಲಿ ಜತೆಗೂಡಿ ಹೋರಾಟ ನಡೆಸಲಿದೆ. ಸೀಟು ಹಂಚಿಕೆ ಕುರಿತು ನಡೆಸಿದ ಸಭೆಯಲ್ಲಿ 70 ಕ್ಷೇತ್ರಗಳನ್ನು ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವುದು’ ಎಂದು ಸೊರೇನ್ ಹೇಳಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ನ. 13 ಹಾಗೂ 20ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮತ ಎಣಿಕೆಯು ನ. 23ರಂದು ನಡೆಯಲಿದೆ.
ಏಕಪಕ್ಷೀಯ ನಿರ್ಧಾರ: ಆರ್‌ಜೆಡಿ
ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಸೀಟುಗಳ ಹಂಚಿಕೆ ವಿಷಯದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷವಾದ ಆರ್‌ಜೆಡಿ ಶನಿವಾರ ತನ್ನ ಅಸಮಾಧಾನ ಹೊರಹಾಕಿದೆ. ಅಲ್ಲದೇ ‘ಪಕ್ಷದ ಮುಂದೆ ಎಲ್ಲ ಅವಕಾಶಗಳು ಮುಕ್ತವಾಗಿವೆ’ ಎಂದು ಹೇಳುವ ಮೂಲಕ ತನ್ನ ಮುಂದಿನ ನಡೆ ಕುರಿತು ಸ್ಪಷ್ಟ ಸಂದೇಶ ರವಾನಿಸಿದೆ.
‘ಇಂಡಿಯಾ’ ಒಕ್ಕೂಟ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಎಂಎಂ ಸೀಟುಗಳ ಹಂಚಿಕೆ ಕುರಿತು ನಿರ್ಧಾರ ಕೈಗೊಂಡಿರುವುದು ‘ಏಕಪಕ್ಷೀಯ’ ನಡೆ ಎಂದು ಆರ್‌ಜೆಡಿ ವಕ್ತಾರ ಮನೋಜ್‌ಕುಮಾರ್ ಝಾ ಹೇಳಿದ್ದಾರೆ. ‘ಸೀಟುಗಳ ಹಂಚಿಕೆ ಕುರಿತು ನಮ್ಮೊಂದಿಗೆ ಈ ಎರಡು ಪಕ್ಷಗಳು ಸಮಾಲೋಚನೆ ನಡೆಸಿಲ್ಲ’ ಎಂದಿದ್ದಾರೆ.
ಜಾರ್ಖಂಡ್‌ನಲ್ಲಿ 15 ರಿಂದ 18 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆರ್‌ಜೆಡಿ ಮುಂದಾಗಿದ್ದು ಕ್ಷೇತ್ರಗಳನ್ನೂ ಗುರುತಿಸಿದೆ. ಈ ಕ್ಷೇತ್ರಗಳಲ್ಲಿ ಏಕಾಂಗಿಯಾಗಿಯೇ ಬಿಜೆಪಿಯನ್ನು ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.