ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯು ಪಾರದರ್ಶಕವಾಗಿ ನಡೆಯಬೇಕು ಎಂದು ಪಕ್ಷದ ಹಿರಿಯ ನಾಯಕ ಮನೀಶ್ ತಿವಾರಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸಂಸದ ಮತ್ತು ಜಿ-23 ಗುಂಪಿನ ನಾಯಕರಾಗಿರುವ ತಿವಾರಿ ಅವರು ಮತದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಎಐಸಿಸಿ ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಪಕ್ಷದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆನ್ನಲ್ಲೇ ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ ಕೂಡ ಧ್ವನಿಗೂಡಿಸಿದ್ದಾರೆ. ಮತದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸುವ ಮೂಲಕ ಚುನಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
'ಗೌರವಾನ್ವಿತ ಮಧುಸೂದನ್ ಮಿಸ್ತ್ರಿ ಅವರೇ, ಮತದಾರರ ಪಟ್ಟಿ ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದರೆ ನ್ಯಾಯೋಚಿತ ಚುನಾವಣೆ ನಡೆಯಲು ಹೇಗೆ ಸಾಧ್ಯ? ಮತದಾರರ ಹೆಸರು ಮತ್ತು ವಿಳಾಸವು ಸಾರ್ವಜನಿಕವಾಗಿ ಲಭ್ಯಗೊಳ್ಳುವ ರೀತಿಯಲ್ಲಿ ಪಕ್ಷದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ' ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.
ಮತದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸುವುದಿಲ್ಲ. ಪಕ್ಷದ ಸದಸ್ಯರಿಗೆ ಯಾವುದೇ ಪರಿಶೀಲನೆ ಇದ್ದಲ್ಲಿ ಪಿಸಿಸಿ ಕಚೇರಿಗೆ ಭೇಟಿ ನೀಡಬಹುದು. ನಾಮಪತ್ರ ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯನ್ನು ಹಸ್ತಾಂತರಿಸಲಾಗುವುದು ಎಂದು ಕಾಂಗ್ರೆಸ್‌ನ ಚುನಾವಣಾ ಪ್ರಾಧಿಕಾರವು ತಿಳಿಸಿತ್ತು.
ಪಕ್ಷದಲ್ಲಿ ಯಾರಿಗೆ ನಾಮನಿರ್ದೇಶನ ಮಾಡುವ ಅಧಿಕಾರವಿದೆ ಮತ್ತು ಯಾರಿಗೆ ಮತ ಹಾಕುವ ಹಕ್ಕಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿಯುವಂತಾಗಲಿ ಎಂದು ಸಂಸದ ತರೂರ್ ಹೇಳಿದ್ದಾರೆ.
ಪಕ್ಷದಲ್ಲಿನ ಸುಧಾರಣಾವಾದಿಗಳು ಬಂಡಾಯಗಾರರಲ್ಲ ಎಂದಿರುವ ಕಾರ್ತಿ ಚಿದಂಬರಂ ಅವರು ತಿವಾರಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.