ADVERTISEMENT

ಸುಪ್ರೀಂ ಕೋರ್ಟ್ ತೀರ್ಪಿನಂತೆಯೇ ಚುನಾವಣಾ ಆಯುಕ್ತರ ನೇಮಕವಾಗಲಿ– ಕಾಂಗ್ರೆಸ್

ಪಿಟಿಐ
Published 11 ಮಾರ್ಚ್ 2024, 14:25 IST
Last Updated 11 ಮಾರ್ಚ್ 2024, 14:25 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನೂತನ ತಿದ್ದುಪಡಿ ಕಾಯ್ದೆ ಅನುಸಾರ ಚುನಾವಣಾ ಆಯುಕ್ತರನ್ನು ನೇಮಿಸದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕಾಂಗ್ರೆಸ್‌ ಪಕ್ಷದ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಚುನಾವಣಾ ಆಯುಕ್ತರನ್ನು ನೇಮಿಸಲು ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಅಧಿಕಾರ ನೀಡುವ ತಿದ್ದುಪಡಿ ಕಾಯ್ದೆ ಸಿಂಧುತ್ವವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದರಂತೆ ನೋಟಿಸ್‌ ಜಾರಿಯಾಗಿದೆ ಎಂದೂ ಉಲ್ಲೇಖಿಸಿದ್ದಾರೆ.

ತಿದ್ದುಪಡಿ ಕಾಯ್ದೆಯ ಅನುಸಾರ ಆಯುಕ್ತರನ್ನು ನೇಮಿಸಬಾರದು. ಅದಕ್ಕೂ ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಹೊಸ ಆಯುಕ್ತರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲಾಗುವುದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ಈ ಬಗ್ಗೆ ಇ–ಮೇಲ್‌ ಕಳುಹಿಸಿ. ಗಮನಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು ಪ್ರತಿಕ್ರಿಯಿಸಿದೆ. 

ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರೆ ಆಯುಕ್ತರ ನೇಮಕ, ಸೇವಾ ಷರತ್ತು, ಅವಧಿ ಕುರಿತ 2023ರ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 

‘ತಮ್ಮ ಅರ್ಜಿಯ ಸಂಬಂಧ ಜನವರಿ 12ರಂದೇ ನೋಟಿಸ್‌ ಜಾರಿಯಾಗಿದೆ. ಈ ಮಧ್ಯೆ, ಚುನಾವಣಾ ಆಯುಕ್ತ ಅರುಣ್ ಗೋಯಲ್‌ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಮಾರ್ಚ್‌ 9ರಂದು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಶೀಘ್ರವೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟವಾಗಬೇಕಿದ್ದು, ಹೊಸ ಆಯುಕ್ತರ ನೇಮಕದ ಅಗತ್ಯವಿದೆ. ಹೀಗಾಗಿ, ಅನೂಪ್‌ ಬರನ್‌ವಾಲ್‌ ವರ್ಸಸ್‌ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರವೇ ಆಯುಕ್ತರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇರಬೇಕು ಎಂದು ಈ ಬಗ್ಗೆ ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ತಿದ್ದುಪಡಿ ಆಗಿರುವ ‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರೆ ಆಯುಕ್ತರು–ನೇಮಕ, ಸೇವಾ ಷರತ್ತು, ಅವಧಿ–2023’ ಕಾಯ್ದೆಯ ಸೆಕ್ಷನ್ 7 ಮತ್ತು 8ರ ಅನುಸಾರ ಆಯುಕ್ತರನ್ನು ನೇಮಿಸದಂತೆ ತಡೆಯಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸೂಚನೆಯನ್ನು ನೀಡಬೇಕು ಎಂದು ಮೇಲ್ಮನವಿಯಲ್ಲಿ ಜಯಾ ಠಾಕೂರ್ ಕೋರಿದ್ದಾರೆ. 

ತಿದ್ದುಪಡಿ ಕಾಯ್ದೆ ಅನುಸಾರ, ಪ್ರಧಾನಿ ನೇತೃತ್ವದ ತ್ರಿಸದಸ್ಯ ಸಮಿತಿಗೆ ಆಯುಕ್ತರನ್ನು ನೇಮಿಸುವ ಅಧಿಕಾರವಿದೆ. ಪ್ರಧಾನಿಯೇ ನಾಮನಿರ್ದೇಶನ ಮಾಡುವ ಸಂಪುಟ ದರ್ಜೆಯ ಸಚಿವ ಹಾಗೂ ಲೋಕಸಭೆಯ ವಿರೋಧಪಕ್ಷದ ನಾಯಕ ಈ ಸಮಿತಿಯ ಇತರ ಸದಸ್ಯರಾಗಿರುತ್ತಾರೆ.

ಕಾಯ್ದೆಯ ತಿದ್ದುಪಡಿಗೆ ಮುನ್ನ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಸಿಜೆಐ ಕೂಡ ಇದ್ದರು. ತಿದ್ದುಪಡಿಯ ಮೂಲಕ ಸಿಜೆಐ ಅವರನ್ನು ಕೈಬಿಡಲಾಗಿತ್ತು. ಕೇಂದ್ರದ ಈ ನಿಲುವನ್ನು ಕಾಂಗ್ರೆಸ್‌ ಪಕ್ಷ ತೀವ್ರವಾಗಿ ವಿರೋಧಿಸಿತ್ತು.

ಅರ್ಜಿದಾರರಾದ ಜಯಾ ಠಾಕೂರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕಾಸ್‌ ಸಿಂಗ್, ವಕೀಲ ವರುಣ್‌ ಠಾಕೂರ್ ಅವರು ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದರು.

15ಕ್ಕೆ ಪ್ರಧಾನಿ ನೇತೃತ್ವದ ಸಮಿತಿ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ನೂತನ ಚುನಾವಣಾ ಆಯುಕ್ತರ ಹೆಸರು ಅಂತಿಮಗೊಳಿಸಲು ಮಾರ್ಚ್‌ 15ರಂದು ಸಭೆ ಸೇರಲಿದೆ. ಆಯುಕ್ತರಾಗಿದ್ದ ಅರುಣ್‌ ಗೋಯಲ್ ಅವರು ರಾಜೀನಾಮೆ ನೀಡಿದ ಬಳಿಕ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಒಬ್ಬರೇ ಉಳಿದಿದ್ದಾರೆ. ಇನ್ನೊಬ್ಬ ಆಯುಕ್ತ ಅನೂಪ್‌ ಚಂದ್ರ ಪಾಂಡೆ ಅವರ ನಿವೃತ್ತರಾಗಿದ್ದರು. ಹೀಗಾಗಿ ಪ್ರಸ್ತುತ ಎರಡು ಆಯುಕ್ತ ಸ್ಥಾನಗಳು ತೆರವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.