ಪಟ್ನಾ(ಬಿಹಾರ): ಎನ್‌ಡಿಎ ಸಂವಿಧಾನವನ್ನು ಬದಲಾಯಿಸಲು ಉದ್ದೇಶಿಸಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಸುಳ್ಳು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸಂವಿಧಾನದ ರಕ್ಷಣೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಈ (ಕಾಂಗ್ರೆಸ್) ನಾಯಕರು ಒಂದು ಕುಟುಂಬವನ್ನು ಉತ್ತೇಜಿಸಲು ತಮ್ಮದೇ ಪಕ್ಷದ ಸಂವಿಧಾನವನ್ನು ರಕ್ಷಿಸಲು ವಿಫಲರಾದಾಗ ಅಂತಹ ವಿಷಯಗಳ ಬಗ್ಗೆ ಅವರು ಹೇಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಸೋನಿಯಾ ಗಾಂಧಿ ಅವರ ಬೆಳವಣಿಗೆಗೆ ಯಾವುದೇ ಧಕ್ಕೆಯಾಗದಂತೆ ತಡೆಯಲು ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಮ್ ಕೇಸರಿ ಅವರನ್ನು ಹೇಗೆ ಕೊಠಡಿಯಲ್ಲಿ ಬಂಧಿಸಲಾಯಿತು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸರಿಯಾದ ಗೌರವವನ್ನು ನೀಡಲಿಲ್ಲ. ಅವರಿಗೆ 1990ರಲ್ಲಿ ಭಾರತ ರತ್ನ ನೀಡಲಾಯಿತು. ಅವರು ಸಂವಿಧಾನ ಅಥವಾ ಅಂಬೇಡ್ಕರ್ ಬಗ್ಗೆ ಮಾತನಾಡಲು ಅರ್ಹರಲ್ಲ. ಮೋದಿ ಅವರು ದೇಶದ ಬೆಳವಣಿಗೆ, ಸಮಾಜದ ದುರ್ಬಲ ವರ್ಗಗಳ ಉನ್ನತಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.
ಇನ್ನು ಪೂರ್ವ ರಾಜ್ಯಗಳ ಬೆಳವಣಿಗೆ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ನಿರ್ಮಲಾ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.