ನವದೆಹಲಿ: ಇಂದು (ಜೂನ್ 9) ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಿಗೆ ಇನ್ನೂ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಂತರರಾಷ್ಟ್ರೀಯ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆದರೆ ನಮ್ಮ ಪಕ್ಷದ ನಾಯಕರಿಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಹೇಳಿದರು.
'ಪ್ರಮಾಣ ಸ್ವೀಕರಿಸುವ ವ್ಯಕ್ತಿ ತನ್ನ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅವರ (ಮೋದಿ) ಹೆಸರಿನಲ್ಲಿ ಜನಾದೇಶವನ್ನು ಕೇಳಲಾಯಿತು. ಆದರೆ ಅದನ್ನು ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಈ ಪ್ರಮಾಣ ವಚನದ ನಾಟಕವನ್ನು ಏಕೆ ಮಾಡುತ್ತಿದ್ದಾರೆ ಎಂಬುವುದು ನಮಗೆ ಅರ್ಥವಾಗುತ್ತಿಲ್ಲ' ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತನಾಡುತ್ತಾ, ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಈವರೆಗೆ ನಮಗೆ ಆಹ್ವಾನ ಬಂದಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಇಂಡಿಯಾ ಕೂಟ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಇಂದು (ಭಾನುವಾರ) ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ಸತತ 3ನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭಕ್ಕೆ ವಿದೇಶಗಳ ಪ್ರಮುಖ ನಾಯಕರಲ್ಲದೆ, ಭಾರತೀಯ ರೈಲ್ವೆಯ 10 ಲೋಕೋ ಪೈಲಟ್‌ಗಳನ್ನೂ ಆಹ್ವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.