ADVERTISEMENT

ರಾಷ್ಟ್ರಗೀತೆಗೆ ಎದ್ದು ನಿಲ್ಲದ ಕಾಂಗ್ರೆಸ್‌ ಶಾಸಕ: ಬಿಜೆಪಿ ಆಕ್ರೋಶ

ಪಿಟಿಐ
Published 13 ಡಿಸೆಂಬರ್ 2022, 10:53 IST
Last Updated 13 ಡಿಸೆಂಬರ್ 2022, 10:53 IST
.
.   

ಪಟ್ನಾ: ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನ ಮೊದಲ ದಿನವಾದ ಸೋಮವಾರ, ರಾಷ್ಟ್ರಗೀತೆ ಹಾಡುವಾಗ ಕಾಂಗ್ರೆಸ್‌ ಶಾಸಕ ಅಬಿದುರ್‌ ರೆಹಮಾನ್‌ ಅವರು ಎದ್ದುನಿಂತು ಗೌರವ ಸೂಚಿಸಲಿಲ್ಲ. ಶಾಸಕರ ಈ ವರ್ತನೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತ‍ಡಿಸಿದ್ದಾರೆ.

‘ಕಾಲಿನಲ್ಲಿ ನೋವಿದ್ದ ಕಾರಣಕ್ಕೆ ರಾಷ್ಟ್ರಗೀತೆ ಹಾಡುವ ವೇಳೆ ಎದ್ದುನಿಲ್ಲಲು ಆಗಲಿಲ್ಲ’ ಎಂದು 55 ವರ್ಷದ ರೆಹಮಾನ್‌ ಹೇಳಿದ್ದಾರೆ. ಆದರೆ, ಕಲಾಪ ಆರಂಭಕ್ಕೂ ಮುನ್ನ ಗಣ್ಯರ ನಿಧನಕ್ಕೆ ಸಂತಾಪ ಸೂಚಿಸುವ ವೇಳೆ ಇದೇ ಶಾಸಕರು ಎರಡು ನಿಮಿಷ ಎದ್ದುನಿಂತಿದ್ದರು.

‘ಕಾಲು ನೋವಿದ್ದ ಕಾರಣ ಅವರಿಗೆ ರಾಷ್ಟ್ರಗೀತೆ ವೇಳೆ ಎದ್ದುನಿಲ್ಲಲು ಆಗಲಿಲ್ಲ ಎಂದಾದರೆ, ನಂತರ ಎರಡು ನಿಮಿಷ ಎದ್ದು ನಿಂತಿದ್ದರು. ಆಗ ಅವರ ಕಾಲುನೋವು ಎಲ್ಲಿ ಹೋಗಿತ್ತು? ಆದ್ದರಿಂದ, ಇದು ರಾಷ್ಟ್ರಗೀತೆಗೆ ಬೇಕೆಂದೇ ಎಸಗಿದ ಅಪಮಾನ’ ಎಂದು ಬಿಜೆಪಿ ಶಾಸಕ ನೀರಜ್‌ ಸಿಂಗ್‌ ಬಬ್ಲು ಪ್ರತಿಕ್ರಿಯಿಸಿದರು.

ADVERTISEMENT

‘ಅಬಿದುರ್‌ ಅವರು ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಕುರಿತು ಸ್ಪೀಕರ್‌ ಅವರು ಪರಿಶೀಲನೆ ನಡೆಸಬೇಕು’ ಎಂದು ತಾರ್‌ಕಿಶೋರ್‌ ಪ್ರಸಾದ್‌ ಒತ್ತಾಯಿಸಿದರೆ, ‘ಅಬಿದುರ್‌ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದುಮತ್ತೊಬ್ಬ ಬಿಜೆಪಿ ಶಾಸಕ ಪ್ರಮೋದ್‌ ಕುಮಾರ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.