ADVERTISEMENT

ಭಾರತ್‌ ಜೋಡೊ ಯಾತ್ರೆ ವೇಳೆ ಹೃದಯಾಘಾತಕ್ಕೀಡಾಗಿ ಕಾಂಗ್ರೆಸ್‌ ಸಂಸದ ಕೊನೆಯುಸಿರು

ಪಿಟಿಐ
Published 14 ಜನವರಿ 2023, 16:20 IST
Last Updated 14 ಜನವರಿ 2023, 16:20 IST
ಸಂತೋಖ್‌ ಚೌಧರಿ
ಸಂತೋಖ್‌ ಚೌಧರಿ    

ಚಂಡೀಗಢ: ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಲಂಧರ್‌ ಸಂಸದ ಸಂತೋಖ್‌ ಸಿಂಗ್‌ ಚೌಧರಿ (76) ಅವರು ಹೃದಯ ಸ್ತಂಭನದಿಂದಾಗಿ ಶನಿವಾರ ಮೃತಪಟ್ಟರು. ಹೀಗಾಗಿ 24 ಗಂಟೆಗಳ ಕಾಲ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು.

ಚೌಧರಿ ಅವರು ಜಲಂಧರ್‌ನ ಫಿಲ್ಲೌರ್‌ನಲ್ಲಿ ನಡೆಯುತ್ತಿದ್ದ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರ ಜತೆ ಹೆಜ್ಜೆ ಹಾಕುತ್ತಿದ್ದರು. ಕೆಲ ಸಮಯದ ನಂತರ, ಅಸ್ವಸ್ಥರಾಗಿ ಕುಸಿದರು. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಯಿತು. ಆದರೆ, ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.

‘ಸಂತೋಖ್‌ ಸಿಂಗ್‌ ಚೌಧರಿ ಅವರ ನಿಧನದ ಹಿನ್ನೆಲೆಯಲ್ಲಿ 24 ತಾಸುಗಳ ಕಾಲ ಯಾತ್ರೆಯನ್ನು ಮುಂದೂಡಲಾಗಿದೆ. ಜಲಂಧರ್‌ನ ಖಾಲ್ಸಾ ಕಾಲೇಜು ಮೈದಾನದಿಂದ ಭಾನುವಾರ ಮಧ್ಯಾಹ್ನ ಯಾತ್ರೆ ಮತ್ತೆ ಆರಂಭವಾಗಲಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್‌ ರಮೇಶ್‌ ಹೇಳಿದ್ದಾರೆ. ‘ಭಾನುವಾರ ಜಲಂಧರ್‌ನಲ್ಲಿ ನಿಗದಿಯಾಗಿದ್ದ ರಾಹುಲ್‌ ಗಾಂಧಿ ಅವರ ಪತ್ರಿಕಾಗೋಷ್ಠಿಯನ್ನು ಸಹ ಮುಂದೂಡಲಾಗಿದೆ. ಹೋಷಿಯಾರ್‌ಪುರದಲ್ಲಿ ಇದೇ 17ರಂದು ಅವರು ಪತ್ರಿಕಾಗೋಷ್ಠಿ ನಡೆಸುವರು’ ಎಂದು ತಿಳಿಸಿದ್ದಾರೆ.

ADVERTISEMENT

ದಲಿತ ಸಮುದಾಯದ ನಾಯಕರಾಗಿದ್ದ ಚೌಧರಿ ಅವರು ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಜಲಂಧರ್‌ ಜಿಲ್ಲೆಯ ಕರ್ತಾರಪುರ ಬಳಿಯ ಧಲಿವಾಲ್‌ ಗ್ರಾಮದವರು.

ಅವರ ತಂದೆ ಗುರ್ಬಂತ್ ಸಿಂಗ್‌ ಅವರೂ ಕೂಡ ಪ್ರಭಾವಿ ನಾಯಕರಾಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಗುರ್ಬಂತ್‌ ಸಿಂಗ್‌ ಅವರು ಪಂಜಾಬ್‌ನ ಕೃಷಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಚೌಧರಿ ಅವರ ಪುತ್ರ ವಿಕ್ರಮಜಿತ್‌ ಸಿಂಗ್‌ ಅವರು ಫಿಲ್ಲೌರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರೆ, ಅಣ್ಣ ಚೌಧರಿ ಜಗಜೀತ್‌ ಸಿಂಗ್‌ ಅವರು ಪಂಜಾಬ್ ಸರ್ಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಸಚಿವರಾಗಿದ್ದರು.

ಸಾಂತ್ವನ: ರಾಹುಲ್‌ ಗಾಂಧಿ ಅವರು ಚೌಧರಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ‘ಚೌಧರಿ ಅವರ ಹಠಾತ್‌ ನಿಧನದಿಂದ ದಿಗ್ಭ್ರಮೆಯಾಗಿದೆ. ಅವರು ಶ್ರಮಜೀವಿಯಾಗಿದ್ದರಲ್ಲದೇ, ಸರಳ ವ್ಯಕ್ತಿಯಾಗಿದ್ದರು. ಕಾಂಗ್ರೆಸ್ ಸಂಘಟನೆಗೆ ಅಪಾರ ಕೊಡುಗೆ ನೀಡಿದ್ದ ಅವರು, ತಮ್ಮ ಜೀವನವನ್ನು ಸಾರ್ವಜನಿಕರ ಸೇವೆಗೆ ಮುಡಿಪಾಗಿಟ್ಟಿದ್ದರು’ ಎಂದು ಟ್ವೀಟ್‌ ಮೂಲಕ ರಾಹುಲ್‌ ಗಾಂಧಿಯವರು ಗೌರವ ಸಲ್ಲಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಂಜಾಬ್ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾವಾರಿಂಗ್, ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌, ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ಮುಖಂಡರು ಚೌಧರಿ ನಿಧನಕ್ಕೆ ಶೋಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.