ಮುಂಬೈ: ಕರ್ನಾಟಕದಲ್ಲಿ ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರವು ಮುಸ್ಲಿಮರ ಶೇ 4ರಷ್ಟು ಮೀಸಲಾತಿ ಪ್ರಮಾಣವನ್ನು ಮರು ಸ್ಥಾಪಿಸಬೇಕು ಎಂದು ಜಮಿಯಾತ್ ಉಲೇಮಾ–ಇ–ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದಾನಿ ಸೋಮವಾರ ಆಗ್ರಹಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತಿದ್ದ ಶೇ 4ರಷ್ಟು ಮೀಸಲಾತಿ ಕೋಟಾವನ್ನು ಈ ಹಿಂದಿನ ಬಿಜೆಪಿ ಸರ್ಕಾರ ಮಾರ್ಚ್‌ನಲ್ಲಿ ರದ್ದುಪಡಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಇಲ್ಲಿನ ಆಜಾದ್ ಮೈದಾನದಲ್ಲಿ ನಡೆದ ಜಮಿಯಾತ್ ಉಲೇಮಾ–ಇ–ಹಿಂದ್‌ನ ಮೂರು ದಿನಗಳ ಸಭೆಯ ಕೊನೆಯ ದಿನ ಮಾತನಾಡಿದ ಮದಾನಿ ಅವರು, ‘ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಜರಂಗದಳ ಮತ್ತು ಇತರ ಸಂಘಟನೆಗಳ ನಿಷೇಧಿಸುವ ಕುರಿತು ನೀಡಿದ್ದ ಭರವಸೆ ಶ್ಲಾಘನೀಯ. ಈಗ ಕಾಂಗ್ರೆಸ್‌ಗೆ, ತಾನು ನೀಡಿದ್ದ ಚುನಾವಣಾ ಭರವಸೆಗಳನ್ನು ಈಡೇರಿಸಲು ಮತ್ತು ಮುಸ್ಲಿಮರ ಮೀಸಲಾತಿಯನ್ನು ಮರು ಸ್ಥಾಪಿಸಲು ಸಮಯ ಬಂದಿದೆ’ ಎಂದು ಹೇಳಿದರು.
‘ದ್ವೇಷದ ಕಾರ್ಯಸೂಚಿಯನ್ನು ಕರ್ನಾಟಕದ ಜನರು ತಿರಸ್ಕರಿಸಿರುವುದನ್ನು ಈ ಚುನಾವಣಾ ಫಲಿತಾಂಶ ತೋರಿಸುತ್ತದೆ. ಕೋಮುವಾದದ ವಿರುದ್ಧ 75 ವರ್ಷಗಳ ಹಿಂದೆಯೇ ಕಾಂಗ್ರೆಸ್ ಇಂಥ ದೃಢ ನಿಲುವು ತಳೆದಿದ್ದರೆ ಅದು ಕೇಂದ್ರದಲ್ಲಿ ಅಧಿಕಾರದಿಂದ ಕೆಳಗಿಳಿಯುತ್ತಲೇ ಇರಲಿಲ್ಲ’ ಎಂದು ಅವರು ವಿಶ್ಲೇಷಿಸಿದರು.
‘ಗಾಂಧೀಜಿ (1948) ಹತ್ಯೆಯ ಬಳಿಕ, ಭುಗಿಲೆದ್ದಿದ್ದ ಮತೀಯವಾದವನ್ನು ಹತ್ತಿಕ್ಕಿದ್ದರೆ ದೇಶ ವಿನಾಶದಿಂದ ಪಾರಾಗುತ್ತಿತ್ತು’ ಎಂದು ಮದನಿ ಪ್ರತಿಪಾದಿಸಿದರು.
ಏಕರೂಪ ನಾಗರಿಕ ಸಂಹಿತೆ ತರುವ ಪ್ರಯತ್ನಗಳನ್ನು ಖಂಡಿಸಿದ ಮದಾನಿ, ‘ಇದು ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪಿತೂರಿ’ ಎಂದು ದೂರಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ನೆಪದಲ್ಲಿ ಹಿಂದೂ ಪುನರುಜ್ಜೀವನವನ್ನು ಉತ್ತೇಜಿಸುವ ಪ್ರಯತ್ನಗಳು ಪ್ರಾರಂಭವಾಗಿವೆ ಎಂದ ಅವರು, ಇದರ ವಿರುದ್ಧ ಜಮಿಯಾತ್ ಉಲೇಮಾ– ಇ– ಹಿಂದ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.