ADVERTISEMENT

ನಿನ್ನೆ ಮೋದಿಗೆ, ಇಂದು ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟ ಪರಿಸರ ಹೋರಾಟಗಾರ್ತಿ 

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 7:46 IST
Last Updated 8 ಮಾರ್ಚ್ 2020, 7:46 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಆರಂಭಿಸಿದ್ದ #SheinspIresus ಅಭಿಯಾನದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್‌ ಅವರನ್ನು ಬೆಂಬಲಿಸಿ, ಮೋದಿಯನ್ನು ಟೀಕಿಸಿದ್ದ ಕಾಂಗ್ರೆಸ್‌ಗೆ ಅದೇ ಪರಿಸರ ಹೋರಾಟಗಾರ್ತಿ ಭಾನುವಾರ ಟ್ವಿಟರ್‌ ಮೂಲಕ ತಿರುಗೇಟು ನೀಡಿದ್ದಾರೆ.

‘ನರೇಂದ್ರ ಮೋದಿ ಅವರೇ, ನನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕೆಲಸಗಳನ್ನು ಸಂಭ್ರಮಿಸಬೇಡಿ. ನಿಮ್ಮ ಕರೆಯ ಮೇರೆಗೆ ಆರಂಭವಾದ #SheInspiresUs ಅಭಿಯಾನದಲ್ಲಿ ನನ್ನನ್ನೂ ಪರಿಗಣಿಸಿದಕ್ಕೆ ಧನ್ಯವಾದಗಳು. ತುಂಬಾ ಯೋಚಿಸಿದ ನಂತರ ನಾನು ಈ ಗೌರವವನ್ನು ನಿರಾಕರಿಸಲು ನಿರ್ಧರಿಸಿದ್ದೇನೆ,’ ಎಂದು ಅವರು ಶನಿವಾರ ಟ್ವೀಟ್‌ ಮಾಡಿದ್ದರು.

ಲಿಸಿಪ್ರಿಯಾ ಅವರ ಈ ಮಾತನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌, ‘ಮೋದಿ ಅವರ ಬಾಯಿ ಮಾತಿನ, ಬೂಟಾಟಿಕೆಯ ಮಹಿಳಾ ಕಲ್ಯಾಣ ಕಾರ್ಯವನ್ನು ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ದಿಕ್ಕರಿಸಿದ್ದಾರೆ. ಮೋದಿ ಅಭಿಯಾನದಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸಿರುವ ಆಕೆ, ಯಾವುದೇ ಟ್ವಿಟರ್‌ ಅಭಿಯಾನಕ್ಕಿಂತಲೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ತನ್ನ ಕೂಗು ಕೇಳುವುದು ಮುಖ್ಯ ಎಂದು ಹೇಳಿದ್ದಾರೆ,’ ಎಂದು ಟ್ವೀಟ್‌ ಮಾಡಿ ಮೋದಿ ಅವರನ್ನು ಟೀಕಿಸಿತ್ತು.

ADVERTISEMENT

ಕಾಂಗ್ರೆಸ್‌ನ ಈ ಟ್ವೀಟ್‌ಗೆ ತಿರುಗೇಟು ನೀಡಿರುವ ಲಿಸಿಪ್ರಿಯಾ, ‘ಸರಿ ನನ್ನ ಬಗ್ಗೆ ನಿಮಗೆ ಸಹಾನುಭೂತಿ ಇದೆಯೇ? ಹಾಗಿದ್ದರೆ ನೇರವಾಗಿ ವಿಚಾರಕ್ಕೆ ಬರೋಣ. ನಿಮ್ಮ ಪಕ್ಷದಿಂದ ಗೆದ್ದಿರುವ ಎಷ್ಟು ಮಂದಿ ಸಂಸದರು ನನ್ನ ಕೂಗನ್ನು ಸದ್ಯ ನಡೆಯುತ್ತಿರುವ ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಿಮ್ಮ ಟ್ವಿಟರ್‌ ಅಭಿಯಾನಗಳಿಗೆ ನನ್ನ ಹೆಸರು ಬಳಸಿಕೊಳ್ಳುವುದು ನನಗೆ ಇಷ್ಟವಿಲ್ಲ. ನನ್ನ ಕೂಗನ್ನು ಕೇಳುವವರು ಯಾರು?’ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ‘ಆಡಳಿತ ಮತ್ತು ವಿರೋಧ ಪಕ್ಷಗಳು ನನ್ನನ್ನು ರಾಜಕೀಯಕ್ಕಾಗಿ ಚೆಂಡಿನಂತೆ ಬಳಸಿಕೊಳ್ಳುತ್ತಿವೆ. ಆದರೆ, ನನ್ನ ಬೇಡಿಕೆ ಮತ್ತು ಹೋರಾಟಗಳು ಇದೆಲ್ಲಕ್ಕಿಂತಲೂ ದೂರವಿದೆ. ನಿಮ್ಮ ನಡವಳಿಕೆಗಳು ಸರಿಯಲ್ಲ. ಇದನ್ನು ನಾನು ಸಹಿಸಲಾರೆ. ನಾನು ಅನುಭವಿಸುತ್ತಿರುವ ನೋವುಗಳಿಗೆ ಉತ್ತರವಾಗಿ ನನ್ನ ಬೇಡಿಕೆಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಮತ್ತು ನನ್ನ ವಿಚಾರಗಳನ್ನು ಖಾಸಗಿ ವಿದೇಯಕವಾಗಿ ಸಂಸತ್‌ನಲ್ಲಿ ಮಂಡಿಸುವುದಾಗಿ ಭರವಸೆ ನೀಡುವ ಪತ್ರವೊಂದನ್ನು ರಾಜಕೀಯ ಪಕ್ಷಗಳು ಮತ್ತು ಸಂಸದರು ದಯಮಾಡಿ ಕಳುಹಿಸಿಕೊಡಿ,’ ಎಂದೂ ಆಕೆ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.