ಭೋಪಾಲ್: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಅವರ ವಿರೋಧಿಯಲ್ಲ ಎಂದು ಪುನರುಚ್ಚರಿಸಿರುವ ಸಂಸದ ಶಶಿ ತರೂರ್, ಚುನಾವಣೆಯ ಬಳಿಕವೂ ಹಿಂದಿನಂತೆಯೇ ಒಗ್ಗಟ್ಟಾಗಿ ಕೆಲಸ ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.
ಈ ಮೊದಲು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಖರ್ಗೆ ಅವರಿಗೆ ಬಹಿರಂಗ ಬೆಂಬಲ ಸಿಗುತ್ತಿರುವ ಬಗ್ಗೆ ತರೂರ್ ಅಸಮಾಧಾನ ತೋಡಿಕೊಂಡಿದ್ದರು.
ಮಧ್ಯಪ್ರದೇಶದ ಕಾಂಗ್ರೆಸ್ ಪ್ರತಿನಿಧಿನಿಗಳಿಂದ ದೊರಕಿರುವ ಬೆಂಬಲದ ಬಗ್ಗೆ ತರೂರ್ ಅತೀವ ಸಂತೋಷವನ್ನು ವ್ಯಕ್ತಪಡಿಸಿದರು.
ಬೇರೆ ಯಾವ ರಾಜ್ಯದಲ್ಲೂ ನನಗೆ ಈ ರೀತಿಯ ಸ್ವಾಗತ ದೊರಕಿರಲಿಲ್ಲ ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿ ನನ್ನನ್ನು ಬರಮಾಡಿಕೊಂಡ ರೀತಿಯು ಸಂತಸ ತಂದಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಮತ್ತು ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ನನ್ನನ್ನು ಭೇಟಿಯಾದರು. ಇದು ನಿಜ, ಬೇರೆ ರಾಜ್ಯಗಳಲ್ಲಿ ನನಗೆ ಈ ರೀತಿಯ ಬೆಂಬಲ ಸಿಕ್ಕಿರಲಿಲ್ಲ ಎಂದು ತರೂರ್ ಹೇಳಿದರು.
ಮಾತು ಮುಂದುವರಿಸಿದ ಅವರು ಯಾರೇ ಅಧ್ಯಕ್ಷರಾದರೂ ಗಾಂಧಿ ಪರಿವಾರವನ್ನು ದೂರವಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.