ಭುವನೇಶ್ವರ: ಒಡಿಶಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಸ್ವ–ಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ಬಹಿನಿಪತಿ, ‘ಒಡಿಶಾದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳಾ ಸ್ವ–ಸಹಾಯ ಗುಂಪುಗಳ ಸದಸ್ಯರ ಬ್ಯಾಂಕ್ ಸಾಲವನ್ನು ಪಕ್ಷದ ‘ನಾರಿ ನ್ಯಾಯ ಗ್ಯಾರಂಟಿ’ ಅಡಿಯಲ್ಲಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪಕ್ಷದ ‘ಮಹಾಲಕ್ಷಿ ಗ್ಯಾರಂಟಿ’ ಅಡಿಯಲ್ಲಿ ಎಲ್ಲಾ ಬಡ ಕುಟುಂಬಗಳ ತಲಾ ಒಬ್ಬ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ ನೀಡಲಾಗುವುದು. ಅಲ್ಲದೆ, ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿಯನ್ನು ‘ನಾರಿ ನ್ಯಾಯ’ ಗ್ಯಾರಂಟಿಯಡಿಯಲ್ಲಿ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅವರಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲು ಸರ್ಕಾರವು ಪ್ರತಿ ಪಂಚಾಯತ್‌ನಲ್ಲಿ 'ಅಧಿಕಾರ ಮೈತ್ರಿ' ಯೋಜನೆ ಅಡಿಯಲ್ಲಿ ಕಾನೂನು ಸಲಹೆಗಾರರನ್ನು ನೇಮಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಾವಿತ್ರಿ ಬಾಯಿ ಫುಲೆ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕೆಲಸ ನಿರತ ಮಹಿಳೆಯರಿಗೆ ವಸತಿ ನಿಲಯವನ್ನು ಸರ್ಕಾರ ನಿರ್ಮಾಣಗೊಳಿಸಲಿದೆ. ಅಲ್ಲದೆ, ವಾರ್ಷಿಕ ₹2 ಲಕ್ಷಕ್ಕೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ₹2 ಲಕ್ಷ ಸಹಾಯಧನವನ್ನು ನೀಡಲಾಗುವುದು ಎಂದು ಮೀನಾಕ್ಷಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.