ADVERTISEMENT

ಧಾರಾವಿ ಯೋಜನೆಗೆ ಮರು ಬಿಡ್‌: ಅದಾನಿಗೆ ಅನುಕೂಲ ಮಾಡುವ ಹುನ್ನಾರ- ಕಾಂಗ್ರೆಸ್

ಕಾಂಗ್ರೆಸ್‌ ಆರೋಪ: ಕೇಂದ್ರದ ವಿರುದ್ಧ ಕಿಡಿ

ಪಿಟಿಐ
Published 18 ಏಪ್ರಿಲ್ 2023, 11:44 IST
Last Updated 18 ಏಪ್ರಿಲ್ 2023, 11:44 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ‘ಮಹಾರಾಷ್ಟ್ರ ಸರ್ಕಾರವು ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಮುಂಬೈನ ಧಾರಾವಿ ಕೊಳೆಗೇರಿ ಮರು ಅಭಿವೃದ್ಧಿ ಯೋಜನೆಗೆ ಮರು ಬಿಡ್‌ ಆಹ್ವಾನಿಸಿತ್ತು. ಇದಕ್ಕಾಗಿ ಈ ಹಿಂದೆ ಬಿಡ್‌ ಜಯಿಸಿದ್ದವರನ್ನು ಉದ್ದೇಶಪೂರ್ವಕವಾಗಿಯೇ ಹೊರದಬ್ಬಲಾಗಿತ್ತು’ ಎಂದು ಕಾಂಗ್ರೆಸ್‌ ಮಂಗಳವಾರ ಆರೋಪಿಸಿದೆ.

‘ಧಾರಾವಿಯನ್ನು ಮರು ಅಭಿವೃದ್ಧಿಗೊಳಿಸುವ ಯೋಜನೆಗಾಗಿ ದುಬೈ ಮೂಲದ ಸೆಕ್‌ಲಿಂಕ್‌ ಟೆಕ್ನಾಲಜಿ ಕಾರ್ಪೊರೇಷನ್‌ ₹7,200 ಕೋಟಿ ಮೊತ್ತದ ಬಿಡ್‌ ಸಲ್ಲಿಸಿತ್ತು. ಅದಾನಿ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯನ್ನು ಹಿಂದಿಕ್ಕಿದ್ದ ಸೆಕ್‌ಲಿಂಕ್‌, 2018ರ ನವೆಂಬರ್‌ನಲ್ಲಿ ಟೆಂಡರ್‌ ಜಯಿಸಿತ್ತು. ರೈಲ್ವೆ ಭೂಮಿ ಹಸ್ತಾಂತರಕ್ಕೆ ತೊಡಕು ಉಂಟಾಗಿರುವ ಕಾರಣ ನೀಡಿ 2020ರ ನವೆಂಬರ್‌ನಲ್ಲಿ ಟೆಂಡರ್‌ ರದ್ದುಗೊಳಿಸಲಾಗಿತ್ತು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

‘ಪಕ್ಷವು ಕೈಗೊಂಡಿದ್ದ ಟ್ವೀಟ್‌ ಸರಣಿಯ ಭಾಗವಾಗಿ ಈ ವರ್ಷದ ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಬಿಡ್‌ನ ಷರತ್ತುಗಳಲ್ಲಿ ಮಾಡಲಾದ ಬದಲಾವಣೆಗಳ ಕುರಿತು ವಿವರ ನೀಡುವಂತೆ ಒತ್ತಾಯಿಸಲಾಗಿತ್ತು. ಅತಿ ಕಡಿಮೆ ಬಿಡ್‌ ಸಲ್ಲಿಸಿದ್ದ ಅದಾನಿ ಸಮೂಹಕ್ಕೆ ಟೆಂಡರ್‌ ಮಂಜೂರು ಮಾಡಿದ್ದರ ಹಿಂದಿನ ಉದ್ದೇಶದ ಕುರಿತೂ ಪ್ರಶ್ನಿಸಲಾಗಿತ್ತು’ ಎಂದಿದ್ದಾರೆ.

ADVERTISEMENT

‘ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಇಡೀ ಪ್ರಕ್ರಿಯೆಯನ್ನು ಹೇಗೆ ತಿರುಚಲಾಗಿದೆ ಎಂಬುದು ಪತ್ರಿಕಾ ವರದಿಗಳಿಂದ ಬಹಿರಂಗವಾಗಿದೆ. ಮಹಾರಾಷ್ಟ್ರದ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಷರತ್ತುಗಳೊಂದಿಗೆ 2022ರ ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಟೆಂಡರ್‌ ಕರೆದಿತ್ತು. ಆಗ ₹5,069 ಕೋಟಿ ಮೊತ್ತದ ಬಿಡ್‌ ಸಲ್ಲಿಸಿದ್ದ ಅದಾನಿ ಸಮೂಹಕ್ಕೆ ಟೆಂಡರ್ ಮಂಜೂರು ಮಾಡಲಾಗಿತ್ತು. ಸೆಕ್‌ಲಿಂಕ್‌ ಕಂಪನಿ ಸಲ್ಲಿಸಿದ್ದ ಬಿಡ್‌ಗೆ ಹೋಲಿಸಿದರೆ ಈ ಮೊತ್ತ ₹2,131 ಕೋಟಿಯಷ್ಟು ಕಡಿಮೆ’ ಎಂದು ಆರೋಪಿಸಿದ್ದಾರೆ.

‘ಟೆಂಡರ್‌ಗೆ ನಿಗದಿಪಡಿಸಲಾಗಿದ್ದ ಷರತ್ತುಗಳಲ್ಲಿ ಮಾರ್ಪಾಡು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಬೆಂಬಲಿತ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರೇ’ ಎಂದೂ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.