ನವದೆಹಲಿ: ‘ಇಡೀ ಚುನಾವಣಾ ಫಲಿತಾಂಶದ ವಿಶ್ವಾಸಾರ್ಹತೆ ಕುರಿತು ಸಾಮಾನ್ಯ ಅನುಮಾನದ ಹೊಗೆಯನ್ನು ಕಾಂಗ್ರೆಸ್ ಪಕ್ಷವು ಹಿಂದಿನಂತೆಯೇ ಈಗಲೂ ಹರಡುವ ಕೆಲಸ ಮಾಡುತ್ತಿದೆ’ ಎಂದು ಹೇಳುವ ಮೂಲಕ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್‌ನ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಳ್ಳಿಹಾಕಿದೆ.
‘ಒಂದು ರಾಷ್ಟ್ರೀಯ ಪಕ್ಷದಿಂದ ಇದಕ್ಕಿಂತ ಕನಿಷ್ಠವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ದೇಶದಲ್ಲಿ ಚುನಾವಣಾ ಪ್ರಜಾಪ್ರಭುತ್ವ ಉಳಿಸಿ ಮತ್ತು ಬಲಪಡಿಸುವಲ್ಲಿ ರಾಜಕೀಯ ಪಕ್ಷಗಳ ದೃಷ್ಟಿಕೋನದ ವಿಮರ್ಶೆಯನ್ನು ಆಯೋಗ ಪ್ರಶಂಸುತ್ತದೆ. ಹಾಗೆಯೇ ಆಯಾ ಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದೆ ಎಂದು ಭರವಸೆ ನೀಡಲಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ಆಯೋಗ ತಿಳಿಸಿದೆ.
‘ಚುನಾವಣಾ ಫಲಿತಾಂಶವು ಈ ಹಿಂದಿನಂತೆಯೇ ಹರಿಯಾಣ ಚುನಾವಣೆಯಲ್ಲೂ ನಿಖರವಾಗಿದೆ. ಆದರೆ ಯಾವುದೇ ಪುರಾವೆಗಳಿಲ್ಲದೆ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ಸಾಮಾನ್ಯ ಅನುಮಾನವನ್ನೇ ದೊಡ್ಡದು ಮಾಡಿದೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ದೀರ್ಘಕಾಲಿಕ ನಿಲುವುಗಳಿಗೆ ಅನುಗುಣವಾಗಿ ದೃಢ ಹಾಗೂ ನಿರ್ಣಾಯಕ ಹೆಜ್ಜೆಗಳನ್ನು ಇಡಬೇಕು ಎಂದು ಆಯೋಗವು ಪ್ರಾಮಾಣಿಕ ಒತ್ತಾಯಿಸುತ್ತದೆ’ ಎಂದು ಹೇಳಿದೆ.
‘ಮತದಾನ ಮತ್ತು ಮತ ಎಣಿಕೆಯಂತ ನಿರ್ಣಾಯಕ ಸಂದರ್ಭಗಳಲ್ಲಿ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ತೀವ್ರ ಕುತೂಹಲದ ಉತ್ತುಂಗದಲ್ಲಿರುವ ಸಂದರ್ಭದಲ್ಲಿ ಕ್ಷುಲ್ಲಕ ಹಾಗೂ ಆಧಾರರಹಿತ ವದಂತಿಗಳನ್ನು ಹರಡಿದಲ್ಲಿ ಅದು ಪ್ರಕ್ಷುಬ್ಧತೆ ಸೃಷ್ಟಿಸುತ್ತದೆ’ ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.