ADVERTISEMENT

ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಪಿಟಿಐ
Published 20 ಜೂನ್ 2023, 12:59 IST
Last Updated 20 ಜೂನ್ 2023, 12:59 IST
ಸಧಾಂಶು ತ್ರಿವೇದಿ
ಸಧಾಂಶು ತ್ರಿವೇದಿ   

ನವದೆಹಲಿ : ಗಾಂಧಿ ಶಾಂತಿ ಪ್ರಶಸ್ತಿಗೆ ಗೀತಾ ಪ್ರೆಸ್‌ಅನ್ನು ಆಯ್ಕೆ ಮಾಡಲಾಗಿರುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿಯು ಮಂಗಳವಾರವೂ ವಾಗ್ದಾಳಿ ನಡೆಸಿದೆ.

‘ದೇಶ, ಹಿಂದೂ ಧರ್ಮ ಮತ್ತು ಮಹಾತ್ಮಾ ಗಾಂಧಿ ಅವರ ವಿಚಾರಗಳ ಕುರಿತು ಕಾಂಗ್ರೆಸ್‌ಗಿರುವ ತಿರಸ್ಕಾರವು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಹೇಳಿದ್ದಾರೆ.

‘ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದು ಹಾಸ್ಯಾಸ್ಪದವಾಗಿದೆ. ಇದು ಸಾವರ್ಕರ್‌ ಅಥವಾ ನಾಥೂರಾಂ ಗೋಡ್ಸೆ ಅವರಿಗೆ ಈ ಪ್ರಶಸ್ತಿ ನೀಡಿದಂತೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅವರು ಹೇಳಿಕೆ ನೀಡಿದ್ದರು. 

ADVERTISEMENT

ಬಿಜೆಪಿ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿ‌ಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸುಧಾಂಶು ಅವರು, ‘ಗೀತಾ ಪ್ರೆಸ್‌ಗೆ ಪ್ರಶಸ್ತಿ ನೀಡಿರುವ ಕುರಿತು ಕಾಂಗ್ರೆಸ್‌ ನೀಡಿರುವ ಸ್ವೀಕೃತವಲ್ಲದ, ಆಕ್ಷೇಪಾರ್ಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ’ ಎಂದರು.

‘ಕಾಂಗ್ರೆಸ್‌ ಹೇಳಿಕೆಯು ಕೇವಲ ಗೀತಾ ಪ್ರೆಸ್‌ ವಿರುದ್ಧವಾಗಿ ಇಲ್ಲ. ಬದಲಾಗಿ, ಭಗವದ್ಗೀತೆ ವಿರುದ್ಧವಾಗಿಯೂ ಇದೆ. ದೇಶದ ಪರಂಪರೆ, ಸಂಸ್ಕೃತಿ, ಭಾರತೀಯತೆ ಮತ್ತು ಹಿಂದೂ ಧರ್ಮದ ಜೊತೆ ಬೆಸೆದುಕೊಂಡಿರುವ ಯಾವುದೇ ವಿಚಾರವನ್ನು ಅವಹೇಳನ ಮಾಡುವ  ಅವಕಾಶವನ್ನು ಕಾಂಗ್ರೆಸ್‌ ನಾಯಕರು ಕೈಚೆಲ್ಲುವುದಿಲ್ಲ. ಅದು ಅವರ ಮನಸ್ಥಿತಿಯಾಗಿದೆ’ ಎಂದು ಆರೋಪಿಸಿದರು. 

ಜಾಹೀರಾತುಗಳನ್ನು ಸ್ವೀಕರಿಸದಂತೆ, ದೇಣಿಗೆಯನ್ನು ಪಡೆಯದಂತೆಯೂ ಮಹಾತ್ಮಾ ಗಾಂಧಿ ಅವರು ಗೀತಾ ಪ್ರೆಸ್‌ಗೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಸಂಸ್ಥೆಯು ಇದುವರೆಗೆ ಯಾವುದೇ ಜಾಹೀರಾತುಗಳನ್ನು ಪಡೆದಿಲ್ಲ ಮತ್ತು ತನ್ನ ಸ್ವಂತ ಅಭಿಪ್ರಾಯವನ್ನು ಪ್ರಕಟಿಸಿಲ್ಲ. ಅದು ಕೇವಲ ಸಾಹಿತ್ಯವನ್ನು ಪ್ರಕಟಿಸಿದೆ. ಪ್ರಶಸ್ತಿಯ ಭಾಗವಾಗಿರುವ ₹1 ಕೋಟಿ ನಗದು ಬಹುಮಾನವನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿ ಸಂಸ್ಥೆಯು ಗಾಂಧಿ ಅವರ ಸಿದ್ಧಾಂತಗಳನ್ನು ಅನುಸರಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.