ಪುಣೆ: ಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಮತ್ತು ತಮ್ಮ ಪಕ್ಷ ಜಂಟಿಯಾಗಿ ಸ್ಪರ್ಧಿಸಲಿವೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಸಣ್ಣ ಮಿತ್ರ ಪಕ್ಷಗಳ ಹಿತಾಸಕ್ತಿಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಕಾಪಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಬದಲಾವಣೆಯ ಅಗತ್ಯವಿದ್ದು, ಅದನ್ನು ನಿಭಾಯಿಸುವುದು ವಿರೋಧ ಪಕ್ಷಗಳ ಒಕ್ಕೂಟದ ನೈತಿಕ ಹೊಣೆಯಾಗಿದೆ ಎಂದು ಅವರು ಹೇಳಿದರು.
‘ಅರ್ಜುನನ ಗುರಿ (ಮಹಾಭಾರತ) ಹೇಗೆ ಮೀನಿನ ಒಂದು ಕಣ್ಣಿನ ಮೇಲಿತ್ತೋ, ಹಾಗೆ ನಮ್ಮ ಕಣ್ಣುಗಳು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯತ್ತ ನೆಟ್ಟಿವೆ. ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನಾ (ಯುಬಿಟಿ) ಜಂಟಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿವೆ’ ಎಂದು ಅವರು ಪ್ರತಿಕ್ರಿಯಿಸಿದರು.
ಸೀಟು ಹಂಚಿಕೆ ಕುರಿತು ಮಾತುಕತೆ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ಅದು ಆರಂಭವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಎಡಪಕ್ಷಗಳು, ರೈತರು ಮತ್ತು ಕಾರ್ಮಿಕ ಪಕ್ಷ (ಪಿಡಬ್ಲ್ಯುಪಿ) ಸಹ ಒಕ್ಕೂಟದ ಭಾಗವಾಗಿದ್ದವು. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅವುಗಳ ಹಿತಾಸಕ್ತಿಯನ್ನು ಕಾಪಾಡಬೇಕಿದೆ ಎಂದು ಅವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.