ನವದೆಹಲಿ: ‘ನೀಟ್’ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಸುದ್ದಿಗೆ ಸಂಬಂಧಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ, ‘ಕಳೆದ ಹತ್ತು ವರ್ಷಗಳಿಂದ ಇಂತದೇ ಸ್ಥಿತಿ ಇದೆ. ಇದರಿಂದ ಅಸಂಖ್ಯ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ’ ಎಂದು ಟೀಕಿಸಿದೆ.
ಯುವಜನರ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದಲೇ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿಯೂ ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಗೂ ನಿರುದ್ಯೋಗ ಸಮಸ್ಯೆ ಅಂಶಗಳೇ ಪ್ರಮುಖ ವಿಷಯಗಳಾಗಿವೆ ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ಸುಮಾರು 23 ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಮಾಡಲಾದ ‘ವಂಚನೆ’ ಎಂದು ಟೀಕಿಸಿದ್ದಾರೆ.
ಎಕ್ಸ್ ವೇದಿಕೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ‘ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಕನಸಿರಲಿ ಅಥವಾ ಸರ್ಕಾರಿ ಉದ್ಯೋಗ ಪಡೆಯಲು ಯುವಜನರ ಹೋರಾಟವಿರಲಿ, ಆಕಾಂಕ್ಷಿಗಳಿಗೆ ಮೋದಿ ಸರ್ಕಾರ ಒಂದು ರೀತಿ ಶಾಪವಾಗಿದೆ’ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ನೀಟ್ ಪ್ರಶ್ನೆಪತ್ರಿಕೆಗಳ ಸೋರಿಕೆ ಆಗಿರುವುದು ಬಿಹಾರದಲ್ಲಿ ಬಯಲಾಗಿದೆ. ರಾಜಸ್ಥಾನದಲ್ಲಿ ಕೆಲ ಕೇಂದ್ರಗಳಲ್ಲಿ ಬೇರೆಯದೇ ಪ್ರಶ್ನೆಪತ್ರಿಕೆಯನ್ನು ವಿತರಿಸಿರುವ ದೂರುಗಳಿವೆ’ ಎಂದು ತಿಳಿಸಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಸುಮಾರು 70 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಇದರಿಂದಾಗಿ 2 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹಲವು ರಾಜ್ಯಗಳಲ್ಲಿ ಸೋರಿಕೆಯನ್ನು ತಡೆಯಲು ಕಾಯ್ದೆಗಳಿದ್ದರೂ, ಇಂಥ ಪ್ರಕರಣಗಳು ನಡೆಯುತ್ತಲೇ ಇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.