ADVERTISEMENT

ಸೌರ ಯೋಜನೆಗೆ ಚೀನಾ ನೆರವು ಪಡೆದ ಅದಾನಿ ಸಂಸ್ಥೆ: ಮೋದಿ ವಿರುದ್ಧ ಜೈರಾಮ್ ಕಿಡಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 14:04 IST
Last Updated 29 ಜೂನ್ 2024, 14:04 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ‘ಸೌರ ವಿದ್ಯುತ್ ಉತ್ಪಾದನಾ ಯೋಜನೆ’ಗೆ ನೆರವಾಗಲು ಅದಾನಿ ಸಂಸ್ಥೆಯು ಚೀನಾದ ಎಂಟು ಕಂಪನಿಗಳ ನೆರವು ಪಡೆದುಕೊಂಡಿದೆ ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಶನಿವಾರ ಕಿಡಿಕಾರಿದ್ದಾರೆ.

‘ದೇಶದ ತೆರಿಗೆದಾರರ ಹಣವು ಚೀನಾದ ಕಂಪನಿಗಳಿಗೆ ಹೋಗದಂತೆ ನೋಡಿಕೊಳ್ಳಬೇಕು’ ಎಂದು ಈ ವೇಳೆ ಒತ್ತಾಯಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ರಮೇಶ್‌, ‘2020ರ ಜೂನ್‌ 19ರಂದು ಗಾಲ್ವಾನ್‌ ಘರ್ಷಣೆ ಬಳಿಕ ‘ಅಜೈವಿಕ’ ಪ್ರಧಾನಮಂತ್ರಿ ದೇಶದ ಜನತೆ ಉದ್ದೇಶಿಸಿ, ‘ನಮ್ಮ ಗಡಿಯನ್ನು ಯಾರೂ ಪ್ರವೇಶಿಸಿಲ್ಲ. ಯಾವ ಪ್ರದೇಶವನ್ನೂ ಆಕ್ರಮಿಸಿಲ್ಲ’ ಎಂದಿದ್ದರು.

ADVERTISEMENT

‘ಹೀಗಿದ್ದರೂ ‘ಟೆಂಪೋವಾಲಾ’ ಸ್ನೇಹಿತರೊಬ್ಬರಿಗೆ ಸಹಾಯ ಮಾಡಲು ಚೀನಾದ ಉದ್ಯೋಗಿಗಳಿಗೆ ಉದಾರವಾಗಿ ವೀಸಾ ನೀಡಲು ಯಾವುದೇ ಹಿಂಜರಿಕೆ ಪ್ರದರ್ಶಿಸಿಲ್ಲ’ ಎಂದಿದ್ದಾರೆ. ಅದಾನಿ ಸೋಲಾರ್‌ ಸಂಸ್ಥೆಯು ಚೀನಾದಿಂದ ಕೆಲವು ಎಂಜಿನಿಯರ್‌ಗಳನ್ನು ಕರೆಸಲು ಕೇಂದ್ರದಿಂದ ಅನುಮತಿ ಕೋರಿದ ಕುರಿತು ಪತ್ರಿಕಾ ವರದಿಯನ್ನು ಪೋಸ್ಟ್‌ ಜೊತೆ ಟ್ಯಾಗ್‌ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ‌ಅವರು ‘ಅದಾನಿ, ಅಂಬಾನಿಯನ್ನು ಟೀಕಿಸುವುದನ್ನು ಏಕೆ ನಿಲ್ಲಿಸಿದ್ದಾರೆ. ಅವರ ಪಕ್ಷವು ಟೆಂಪೊ ಲೋಡ್‌ನಷ್ಟು ಹಣ ಪಡೆದಿದೆಯೇ?’ ಎಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ ಗುರಿಯಾಗಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಇದನ್ನು ನೆನಪಿಸಿ ಜೈರಾಮ್ ರಮೇಶ್‌ ಅವರು ‘ಟೆಂ‍ಪೋವಾಲಾ ಸ್ನೇಹಿತರು’ ಎಂದು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆ ಅಡಿಯಲ್ಲಿ ಜನರ ತೆರಿಗೆ ಹಣದ ಲಾಭ ಪಡೆಯುವ ಅದಾನಿ ಸಂಸ್ಥೆಯು‌, ತನ್ನ ಸೌರ ವಿದ್ಯುತ್ ಉತ್ಪಾದನಾ ಯೋಜನೆಗೆ ಚೀನಾದ ಎಂಟು ಕಂಪನಿಗಳ ನೆರವು ಪಡೆದಿದ್ದು, 30 ಚೀನಾ ಉದ್ಯೋಗಿಗಳಿಗೆ ವೀಸಾ ನೀಡಲು ವಿಶೇಷ ಅನುಮತಿಗೆ ಮನವಿ ಮಾಡಿದೆ’ ಎಂದು ರಮೇಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

‘ಕಲ್ಲಿದ್ದಲು, ಇಂಧನ ತಯಾರಿಕಾ ಉಪಕರಣಗಳಲ್ಲಿ‌‌‌‌‌ ಹೆಚ್ಚಿನ ಇನ್‌ವಾಯ್ಸಿಂಗ್‌ ಸೃಷ್ಟಿಸಿ ಮೋದಾನಿ (ಮೋದಿ–ಅದಾನಿ) ಹಲವಾರು ಅಕ್ರಮ ಎಸಗಿದ್ದಾರೆ. ಚಾಂಗ್‌ ಚುಂಗ್‌–ಲಿಂಗ್‌, ನಾಸೀರ್‌ ಅಲಿ ಶಬಾನ್‌ ಅಲಿ ಅವರು ಇದನ್ನು ವ್ಯವಸ್ಥಿತವಾಗಿ ಕಾರ್ಯಗೊಳಿಸಿದ್ದಾರೆ. ಹೀಗಿದ್ದರೂ ಪಾಲುದಾರ ಹಾಗೂ ಆಪ್ತಸ್ನೇಹಿತರು ಲಾಭ ಮಾಡಿಕೊಳ್ಳಲು ಪ್ರಧಾನಿ ಅವರು ದೇಶದ ಭದ್ರತಾ ವಿಚಾರವನ್ನು ಏಕೆ ಪರಿಗಣಿಸಿಲ್ಲ’ ಎಂದು ರಮೇಶ್‌ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.