ADVERTISEMENT

ಜೆಎಂಎಂ ಜತೆ ಕಾಂಗ್ರೆಸ್‌ ಮೈತ್ರಿ; ಅಧಿಕಾರ ಹಿಡಿಯುವ ವಿಶ್ವಾಸದಲ್ಲಿ ಬಿಜೆಪಿ

ಪಿಟಿಐ
Published 15 ಅಕ್ಟೋಬರ್ 2024, 15:37 IST
Last Updated 15 ಅಕ್ಟೋಬರ್ 2024, 15:37 IST
<div class="paragraphs"><p>ಬಿಜೆಪಿ, ಕಾಂಗ್ರೆಸ್</p></div>

ಬಿಜೆಪಿ, ಕಾಂಗ್ರೆಸ್

   

ಪ್ರಾತಿನಿಧಿಕ ಚಿತ್ರ

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಕಾಂಗ್ರೆಸ್ ಮಂಗಳವಾರ ಹೇಳಿದೆ. 

ADVERTISEMENT

‘ನಾವು ನಮ್ಮ ಮೈತ್ರಿ ಪಾಲುದಾರರೊಂದಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದೇವೆ. ಸೀಟು ಹಂಚಿಕೆ ಕುರಿತು ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾವು ಮಾಡಿದ ಅಭಿವೃದ್ಧಿ ಕೆಲಸಗಳಿಂದ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವ್ ಮಹತೋ ಹೇಳಿದ್ದಾರೆ. 

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕೂಡ ತನ್ನ ಮೈತ್ರಿಕೂಟ ಪುನಃ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲ 81 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.

ಮಂಗಳವಾರ ಚುನಾವಣಾ ದಿನಾಂಕಗಳನ್ನು ಘೋಷಿಸಲಾಗುವುದು ಎಂಬುದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಮೊದಲೇ ಹೇಗೆ ತಿಳಿದಿತ್ತು ಎಂಬ ಬಗ್ಗೆಯೂ ಜೆಎಂಎಂ ಇದೇ ವೇಳೆ ಕಳವಳ ವ್ಯಕ್ತಪಡಿಸಿದೆ.

‘ನಾವು ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿದ್ದೇವೆ. ಆದರೆ, ಮಂಗಳವಾರ ಚುನಾವಣೆ ಘೋಷಣೆಯಾಗಲಿದೆ ಎಂದು ಶರ್ಮಾ ಅವರಿಗೆ ಹೇಗೆ ತಿಳಿದಿತ್ತು ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ’ ಎಂದು ಜೆಎಂಎಂ ವಕ್ತಾರ ಮನೋಜ್ ಪಾಂಡೆ ಹೇಳಿದ್ದಾರೆ.

ಜಾರ್ಖಂಡ್‌ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಜಾರ್ಖಂಡ್‌ ಚುನಾವಣೆಗೆ  ಬಿಜೆಪಿ ಉಸ್ತುವಾರಿಯಾಗಿರುವ ಶರ್ಮಾ ಅವರು ಸೋಮವಾರ ಹೇಳಿಕೆ ನೀಡಿದ್ದರು.

ಜೆಎಂಎಂ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಮುಂಬರುವ ಚುನಾವಣೆಯಲ್ಲಿ ಜೆಎಂಎಂಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಹೇಳಿದೆ.

ವಿಧಾನಸಭೆ ಚುನಾವಣೆಗೆ ಎನ್‌ಡಿಎ ಪಾಲುದಾರರ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದೆ. ಚುನಾವಣೆ ಘೋಷಣೆಯಾದ 48 ಗಂಟೆಗಳ ಒಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ಹೇಳಿದೆ.

 ಪ್ರಸ್ತುತ ಜಾರ್ಖಂಡ್ ವಿಧಾನಸಭೆಯ ಅವಧಿಯು 2025ರ ಜನವರಿ 5ರಂದು ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.