ನವದೆಹಲಿ (ಪಿಟಿಐ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕನ್ನಡಿಗ ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ರಾಜಾರೋಷ ದಾಳಿ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಜೈರಾಮ್ ರಮೇಶ್, ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಜೆ.ಪಿ. ನಡ್ಡಾ ಅವರು ಮಾಡಿರುವ ಭಾಷಣದ ವಿಡಿಯೊ ತುಣುಕೊಂದನ್ನು ಟ್ವಿಟ್ ಮಾಡಿದ್ದಾರೆ.
‘ಕರ್ನಾಟಕದಲ್ಲಿ ಅಭಿವೃದ್ಧಿಯ ನದಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಕಮಲದ ಚಿಹ್ನೆಗೆ ಮತ ನೀಡಿ. ರಾಜ್ಯದಲ್ಲಿ ಅಭಿವೃದ್ಧಿಯು ನಿರಂತರ ಮುಂದುವರಿಯುತ್ತದೆ ಎಂಬುದು ಚುನಾವಣೆಗಳಲ್ಲಿ ಒಂದು ವಿಷಯವಾಗಿದೆ. ಆದ್ದರಿಂದ ರಾಜ್ಯವು ಮೋದಿ ಜಿ ಅವರ ಆಶೀರ್ವಾದದಿಂದ ದೂರವಿರದು. ಕಮಲದ ಚಿಹ್ನೆಗೆ ಮತ ಚಲಾಯಿಸುವಂತೆ ಮತ್ತು ಅಭಿವೃದ್ಧಿಯನ್ನು ಮುಂದೊಯ್ಯುವಂತೆ ನಾನು ನಿಮ್ಮಲ್ಲಿ ಮನವಿ ಮಾಡುವೆ’ ಎಂದು ನಡ್ಡಾ ಭಾಷಣದಲ್ಲಿ ಹೇಳಿರುವುದು ಈ ವಿಡಿಯೊ ತುಣುಕಿನಲ್ಲಿದೆ.
‘ಭಕ್ತಿಗೆ ಮಿತಿ ಇರಬೇಕು ನಡ್ಡಾ ಜೀ, ಕರ್ನಾಟಕದ ಜನರಿಗೆ ನೀವು ಯಾಕೆ ಬೆದರಿಕೆವೊಡ್ಡುತ್ತೀರಿ ಮತ್ತು ಹೆದರಿಸುತ್ತಿದ್ದೀರಿ? ನಡ್ಡಾ ಅವರು ಶೇ 40 ಕಮಿಷನ್ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮತ ಚಲಾಯಿಸದಿದ್ದರೆ ಕರ್ನಾಟಕದ ಜನರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸುವ ಬೆದರಿಕೆ ಹಾಕಿದ್ದಾರೆ. ನಾವು ರಾಜನ ಪ್ರಜೆಗಳಲ್ಲ. ಆದರೆ, ಸಂವಿಧಾನದಿಂದ ನಡೆಯುವ ಒಕ್ಕೂಟ ವ್ಯವಸ್ಥೆಯ ದೇಶದ ನಾಗರಿಕರು. ಕನ್ನಡಿಗರ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.