ADVERTISEMENT

ಅಯೋಧ್ಯೆಯಲ್ಲಿ ಭೂ ಹಗರಣ: ಸುಪ್ರೀಂನಿಂದಲೇ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಪಿಟಿಐ
Published 8 ಆಗಸ್ಟ್ 2022, 14:17 IST
Last Updated 8 ಆಗಸ್ಟ್ 2022, 14:17 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ‘ಭೂ ಹಗರಣ’ದ ಕುರಿತು ಸುಪ್ರೀಂ ಕೋರ್ಟ್‌ ಸ್ವಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳಬೇಕು. ಜತೆಗೆ, ಪ್ರಕರಣದ ಕುರಿತು ‍ಪ್ರಧಾನಿ ನರೇಂದ್ರ ಮೋದಿ ಅವರು ‘ಮೌನ’ ಮುರಿಯಬೇಕು ಎಂದು ಕಾಂಗ್ರೆಸ್‌ ಸೋಮವಾರ ಆಗ್ರಹಿಸಿದೆ.

‘ಮರ್ಯಾದಾ ಪುರುಷೋತ್ತಮ ರಾಮನ ಹೆಸರಿನಲ್ಲಿ ಬಿಜೆಪಿ ಹಗರಣ ಮಾಡುತ್ತಿದೆ’ ಎಂದು ಪತ್ರಿಕೆಯೊಂದರ ವರದಿಯನ್ನು ಟ್ಯಾಗ್‌ ಮಾಡಿಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

‘ಭೂ ಹಗರಣದ ಕುರಿತು ನಾವು 2021ರ ಜೂನ್‌ನಿಂದ ಹೇಳುತ್ತಲೇ ಬಂದಿದ್ದೇವೆ. ಈಗ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 40 ಮಂದಿಯ ಪಟ್ಟಿಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವೇ ಬಿಡುಗಡೆ ಮಾಡಿದೆ. ಜನರು ಬಹಳ ನಂಬಿಕೆಯಿಂದ ದೇಣಿಗೆ ನೀಡಿದ್ದರು. ಆದರೆ, ಈ ದೇಣಿಗೆಯನ್ನೇ ಬಿಜೆಪಿ ಕಳ್ಳತನ ಮಾಡಿದೆ’ ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೆತ್‌ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಅಕ್ರಮ ನಿವೇಶನ ಮಾರಾಟ ಹಾಗೂ ಕಟ್ಟಡ ನಿರ್ಮಾಣ ಮಾಡಿದಕ್ಕಾಗಿ ಅಯೊಧ್ಯೆಯ ಮೇಯರ್‌, ಸ್ಥಳೀಯ ಬಿಜೆಪಿ ಶಾಸಕ ಹಾಗೂ ಬಿಜೆಪಿ ಮಾಜಿ ಶಾಸಕ ಸೇರಿದಂತೆ 40 ಮಂದಿಯ ಮೇಲೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.