ಹೈದರಾಬಾದ್: ತೆಲಂಗಾಣದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ತಾನು ನೀಡಿರುವ ಆರೂ ಭರವಸೆಗಳನ್ನು ಜಾರಿಗೆ ತರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸಂಗಾರೆಡ್ಡಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ’ ಎಂದರು. ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಹರಿಹಾಯ್ದ ಖರ್ಗೆ ಅವರು, ‘ನೀವು (ಬಿಆರ್‌ಎಸ್) ಮತಗಳಿಗಾಗಿ ಭರವಸೆ ನೀಡಿ, ನಂತರ ಹೊರಟು ಹೋಗುತ್ತೀರಿ’ ಎಂದರು.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೆಸಿಆರ್ ನೇತೃತ್ವದ ಸರ್ಕಾರದಲ್ಲಿ ಯಾರಿಗೆ ಲಾಭವಾಗಿದೆ? ವಿದ್ಯಾರ್ಥಿಗಳು, ಮಹಿಳೆಯರು ಮತ್ತು ರೈತರು ಪ್ರಯೋಜನ ಪಡೆದಿದ್ದಾರೆಯೇ? ಅದಕ್ಕಾಗಿಯೇ ರಾಜ್ಯಕ್ಕೆ ಕಾಂಗ್ರೆಸ್ ಆರು ಭರವಸೆಗಳನ್ನು ನೀಡುತ್ತಿದೆ’ ಎಂದು ಹೇಳಿದರು.
ಬಿಆರ್‌ಎಸ್ ಮತ್ತು ಬಿಜೆಪಿ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ ಖರ್ಗೆ, ‘70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಮತ್ತು ಮೋದಿ ಪ್ರಶ್ನಿಸುತ್ತಾರೆ. ಅದರ 'ಬಿ' ಟೀಂ ಬಿಆರ್‌ಎಸ್ ಸಹ ಅದೇ ಮಾತನ್ನು ಹೇಳುತ್ತಿದೆ. ಇಬ್ಬರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಅವರಿಗೆ ಪ್ರಯೋಜನವಾಗುವ ಕೆಲಸಗಳನ್ನು ಮಾತ್ರ ಮಾಡುತ್ತಾರೆ’ ಎಂದರು.
ಬಿಆರ್‌ಎಸ್ ಸರ್ಕಾರವು ತನ್ನ ಆಡಳಿತದ ಕೊನೆಯ ಒಂಬತ್ತು ವರ್ಷಗಳಲ್ಲಿ ತೆಲಂಗಾಣವನ್ನು ₹5 ಲಕ್ಷ ಕೋಟಿ ಗಿಂತ ಹೆಚ್ಚಿನ ಸಾಲದ ಬಲೆಗೆ ತಳ್ಳಿದೆ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.