ಜೈಪುರ: ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಸುರೇಂದ್ರ ಪಾಲ್ ಸಿಂಗ್ ಟಿ.ಟಿ ಅವರನ್ನು ಉಪ ಚುನಾವಣೆಗೂ ಮುನ್ನ ರಾಜಸ್ಥಾನ ಸರ್ಕಾರದಲ್ಲಿ ಸಚಿವರನ್ನಾಗಿ ನೇಮಿಸಿರುವುದು ಮಾದರಿ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಘಟಕವು ಭಾನುವಾರ ಚುನಾವಣಾ ಆಯೋಗಕ್ಕೆ (ಇಸಿ) ಪತ್ರ ಬರೆದಿದೆ.
ಜನವರಿ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸುವಂತೆಯೂ ಪತ್ರದಲ್ಲಿ ಕೋರಿದೆ.
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ಡೊಟಸರಾ ಅವರು ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಅಧಿಕಾರಿ ಮತ್ತು ಶ್ರೀಗಂಗಾನಗರದ ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಸುರೇಂದ್ರ ಪಾಲ್ ಸಿಂಗ್ ಅವರನ್ನು ಸಚಿವರಾಗಿ ನೇಮಿಸಿರುವುದು ಚುನಾವಣಾ ಕಾನೂನುಗಳು ಮತ್ತು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ; ವಿಶೇಷವಾಗಿ ಕಲಂ 32ರಲ್ಲಿ, ಚುನಾವಣೆಗಳನ್ನು ಘೋಷಿಸಿದ ಬಳಿಕ ತಾತ್ಕಾಲಿಕ ನೇಮಕಾತಿಗಳನ್ನು ಸರ್ಕಾರ ಮಾಡಬಾರದು ಎಂದು ಹೇಳಲಾಗಿದೆ. ಇಂತಹ ನೇಮಕವು ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀಗಂಗಾನಗರದ ಕರಣ್‌ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸುರೇಂದ್ರ ಪಾಲ್ ಸಿಂಗ್ ಅವರನ್ನು ಭಜನ್‌ಲಾಲ್ ಶರ್ಮಾ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಶನಿವಾರ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕರಾಗಿದ್ದ ಗುರ್ಮೀತ್ ಸಿಂಗ್ ಕೂನರ್ ಅವರು ನವೆಂಬರ್ 15 ರಂದು ಮೃತಪಟ್ಟಿದ್ದರಿಂದ ಕರಣ್‌ಪುರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ನವೆಂಬರ್ 25ರಂದು ರಾಜ್ಯದ ಉಳಿದ ಭಾಗಗಳ ಕ್ಷೇತ್ರಗಳ ಚುನಾವಣೆಯೊಂದಿಗೆ ಈ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಕೂನರ್ ಅವರ ನಿಧನದಿಂದಾಗಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ.
ಗುರ್ಮೀತ್ ಸಿಂಗ್ ಅವರ ಪುತ್ರ ರೂಪಿಂದರ್ ಸಿಂಗ್ ಕೂನರ್ ಅವರನ್ನು ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಕಣಕ್ಕಿಳಿಸಿದೆ. ರೂಪಿಂದರ್ ಅವರಿಗೆ ಅನುಕಂಪದ ನೆಲೆಯಲ್ಲಿ ಮತಗಳು ಸಿಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸುತ್ತಿದೆ. ಆದರೆ, ಬಿಜೆಪಿ ತನ್ನ ಅಭ್ಯರ್ಥಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ನಿರೀಕ್ಷೆಗೆ ದೊಡ್ಡ ಪೆಟ್ಟು ಕೊಟ್ಟಿದೆ. ಇದು ಖಂಡಿತವಾಗಿಯೂ ಈ ಭಾಗದ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.