ADVERTISEMENT

ಸಂವಿಧಾನಕ್ಕೆ ತಿದ್ದುಪಡಿ ತಂದದ್ದು ಕಾಂಗ್ರೆಸ್, ದೂರುವುದು ಬಿಜೆಪಿಯನ್ನು: ಗಡ್ಕರಿ

ಪಿಟಿಐ
Published 10 ನವೆಂಬರ್ 2024, 9:21 IST
Last Updated 10 ನವೆಂಬರ್ 2024, 9:21 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ವಾರ್ಧಾ: ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತಂದ ಕಾಂಗ್ರೆಸ್‌ ಪಕ್ಷವು, ಇದೀಗ ಬಿಜೆಪಿಯು ಸಂವಿಧಾನ ಬದಲಾವಣೆಗೆ ಯತ್ನಿಸುತ್ತಿದೆ ಎಂದು ಭಾವನಾತ್ಮಕ ನೆಲೆಯಲ್ಲಿ ಆರೋಪ ಮಾಡುತ್ತಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಆರೋಪಿಸಿದ್ದಾರೆ.

288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ. ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ವಿದರ್ಭದ ವಾರ್ಧಾ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಚಾರ ಸಭೆಗಳಲ್ಲಿ ಗಡ್ಕರಿ ಭಾನುವಾರ ಭಾಗಿಯಾದರು. ಇದೇ ವೇಳೆ, ಬಿಜೆಪಿಯು ಕಾರ್ಯಕರ್ತರಿಂದ ಕೂಡಿರುವ ಪಕ್ಷವಾಗಿದ್ದರೆ, ಕಾಂಗ್ರೆಸ್‌ ಕುಟುಂಬ ರಾಜಕಾರಣದಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.

ADVERTISEMENT

'ಬಿಜೆಪಿಯು 400ಕ್ಕಿಂತ ಹೆಚ್ಚು ಸ್ಥಾನಗಳನ್ನು (ಲೋಕಸಭೆ ಚುನಾವಣೆಯಲ್ಲಿ) ಗೆದ್ದರೆ, ಸಂವಿಧಾನವನ್ನು ಬದಲಿಸಲಿದೆ ಎಂದು ಅವರು (ಕಾಂಗ್ರೆಸ್‌) ಭಾವನಾತ್ಮಕ ನೆಲೆಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಅವರು ಹೇಳಿದ್ದು ಸುಳ್ಳು' ಎಂದು ದಿಯೋಲಿಯಲ್ಲಿ ಟೀಕಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ, ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ, ಸಂವಿಧಾನದ ಪ್ರಧಾನ ಅಂಶಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪ್ರಸ್ತಾಪಿಸಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತಂದಿತ್ತು ಎಂದು ಸ್ಮರಿಸಿದ್ದಾರೆ.

'ಸಂವಿಧಾನವನ್ನು ಬದಲಿಸಿದ ಅವರು (ಕಾಂಗ್ರೆಸ್‌ನವರು), ನಮ್ಮನ್ನು ದೂರುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಎಷ್ಟು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ? ಆದರೂ, ಕಾಂಗ್ರೆಸ್‌ ಅವುಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರವಿ ವಿಧಾನಸಭೆ ಕ್ಷೇತ್ರದಲ್ಲಿ, ಕಾಂಗ್ರೆಸ್‌ ಪಕ್ಷವು ಗ್ರಾಮೀಣ ಭಾರತಕ್ಕೆ ಪ್ರಾಶಸ್ತ್ಯ ನೀಡಿದ್ದರೆ, ರೈತರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರಲಿಲ್ಲ. ಹಳ್ಳಿಗಳಲ್ಲಿ ಬಡತನ ಕಡಿಮೆಯಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷವೂ ಅಲ್ಲ, ಗಡ್ಕರಿಯದ್ದೂ ಅಲ್ಲ. ಇದು ತಮ್ಮ ಪ್ರಾಣವನ್ನೇ ಸಮರ್ಪಿಸಲು ಸಿದ್ಧವಿರುವ ಕಾರ್ಯಕರ್ತರದ್ದು ಎಂದು ಹೇಳಿಕೊಂಡಿದ್ದಾರೆ.

'ಬಿಜೆಪಿಯು ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ, ಒಬ್ಬ ಪ್ರಧಾನಿ ಮತ್ತೊಬ್ಬ ಪ್ರಧಾನಿಯಿಂದ ಜನ್ಮ ಪಡೆದಿಲ್ಲ. ಸಂಸದ, ಮತ್ತೊಬ್ಬ ಸಂಸದನಿಂದ ಹಾಗೆಯೇ, ಶಾಸಕ ಇನ್ನೊಬ್ಬ ಶಾಸಕನಿಂದ ಹುಟ್ಟಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ಲೋಕಸಭೆಯಲ್ಲಿ ಮಹಾರಾಷ್ಟ್ರದ ನಾಗಪುರ ಕ್ಷೇತ್ರವನ್ನು ಪ್ರತಿನಿಧಿಸುವ ಗಡ್ಕರಿ, ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದ ದಿನಗಳಲ್ಲಿ ವಾರ್ಧಾ ಜಿಲ್ಲೆಗೆ ಸ್ಕೂಟರ್‌ನಲ್ಲಿ ಬಂದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ವಿದರ್ಭ ಅಥವಾ ಮಹಾರಾಷ್ಟ್ರದ ಪೂರ್ವ ಭಾಗದಲ್ಲಿಯೇ ಒಟ್ಟು 62 ವಿಧಾನಸಭೆ ಕ್ಷೇತ್ರಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.