ADVERTISEMENT

ಬೇಜವಾಬ್ದಾರಿಯುತ ಪಕ್ಷ, ದ್ವೇಷ ಹರಡುವ ಕಾರ್ಖಾನೆ: ‘ಕೈ’ ವಿರುದ್ಧ ಮೋದಿ ವಾಗ್ದಾಳಿ

ಪಿಟಿಐ
Published 9 ಅಕ್ಟೋಬರ್ 2024, 9:32 IST
Last Updated 9 ಅಕ್ಟೋಬರ್ 2024, 9:32 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ

ಮುಂಬೈ: ‘ಕಾಂಗ್ರೆಸ್‌ ಬೇಜವಾಬ್ದಾರಿಯುತ ಪಕ್ಷವಾಗಿದ್ದು, ದ್ವೇಷ ಹರಡುವ ಕಾರ್ಖಾನೆಯಾಗಿದೆ’ ಎಂದು ದೂರಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್‌ ಹಿಂದೂಗಳನ್ನು ವಿಭಜಿಸುವ ಮತ್ತು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಬಯಸುವ ಪಕ್ಷವಾಗಿದೆ’ ಎಂದು ಹೇಳಿದರು.

ADVERTISEMENT

‘ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಇದು ದೇಶದ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದ ಅವರು, ‘ಮಹಾರಾಷ್ಟ್ರದಲ್ಲಿ ನಾವು ದೊಡ್ಡ ಗೆಲುವು ಪಡೆಯಬೇಕಿದೆ’ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿನ ₹7,600 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ವರ್ಚುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು. 

‘ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳ ಮೈತ್ರಿಯಾದ ಮಹಾ ವಿಕಾಸ ಅಘಾಡಿಯು (ಎಂವಿಎ) ರಾಜ್ಯವನ್ನು ದುರ್ಬಲಗೊಳಿಸಲು ಅಧಿಕಾರಕ್ಕೆ ಬರಲು ಬಯಸುತ್ತಿದೆ. ಆದರೆ, ಆಡಳಿತಾರೂಢ ಮಹಾಯುತಿಯು ರಾಜ್ಯವನ್ನು ಸದೃಢಗೊಳಿಸುತ್ತಿದೆ’ ಎಂದರು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ.

‘ಮಹಾರಾಷ್ಟ್ರದಲ್ಲಿ ಅಭಿವೃದ್ಧಿ ಯೋಜನೆಗಳು ತ್ವರಿತಗತಿಯಲ್ಲಿ ಅನುಷ್ಠಾನವಾಗುತ್ತಿವೆ. ಈ ಪರಿಯ ಪ್ರಗತಿಯನ್ನು ಮಹಾರಾಷ್ಟ್ರ ಹಿಂದೆಂದೂ ಕಂಡಿರಲಿಲ್ಲ. ಆದರೆ, ಕಾಂಗ್ರೆಸ್‌ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಕಾಂಗ್ರೆಸ್‌ಗೆ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ’ ಎಂದು ಅವರು ಹೇಳಿದರು.

‘ಬಡವರು, ರೈತರು, ಯುವ ಜನರು ಮತ್ತು ಮಹಿಳೆಯರ ಅಭಿವೃದ್ಧಿಯ ಜತೆಗೆ ವಿಕಸಿತ ಭಾರತ ನಮ್ಮ ಗುರಿ’ ಎಂದ ಪ್ರಧಾನಿ ಮೋದಿ, ‘ಕಾಂಗ್ರೆಸ್‌ ಮುಸ್ಲಿಂ ಸಮುದಾಯದವರಲ್ಲಿ ಆತಂಕ ಹುಟ್ಟಿಸಿ, ತಮ್ಮ ಮತ ಬ್ಯಾಂಕ್‌ ಆಗಿ ಪರಿವರ್ತಿಸಿಕೊಳ್ಳುತ್ತದೆ’ ಎಂದು ದೂರಿದರು.

ಪ್ರಧಾನಿ ರಾಜಕೀಯ ಭಾಷಣ: ಕಾಂಗ್ರೆಸ್‌ ಕಿಡಿ

‘ಸರ್ಕಾರಿ ಕಾರ್ಯಕ್ರಮದ ವೇದಿಕೆಯನ್ನು ಪ್ರಧಾನಿ ಅವರು ರಾಜಕೀಯ ಭಾಷಣಕ್ಕೆ ಬಳಸಿದ್ದು ಸರಿಯಲ್ಲ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಈ ಕುರಿತು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ‘ತೆರಿಗೆದಾರರ ಹಣವನ್ನು ತಮ್ಮ ರಾಜಕೀಯ ಭಾಷಣಕ್ಕೆ ಮತ್ತು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಲು ಬಳಸಿದ್ದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.