ADVERTISEMENT

ಹಿಮಾಚಲ ಪ್ರದೇಶ | ಆತಂಕದ ನಡುವೆ ಸುಖು ಸರ್ಕಾರ: ಸಮನ್ವಯ ಸಮಿತಿ ರಚಿಸಿದ ಕಾಂಗ್ರೆಸ್

ಪಿಟಿಐ
Published 11 ಮಾರ್ಚ್ 2024, 4:59 IST
Last Updated 11 ಮಾರ್ಚ್ 2024, 4:59 IST
ಸುಖ್ವಿಂದರ್‌ ಸಿಂಗ್ ಸುಖು
ಸುಖ್ವಿಂದರ್‌ ಸಿಂಗ್ ಸುಖು   

ನವದೆಹಲಿ: ಹಿಮಾಚಲ ಪ್ರದೇಶ ಸರ್ಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಉತ್ತಮ ಸಮನ್ವಯವನ್ನು ಖಾತ್ರಿಪಡಿಸುವ ಸಲುವಾಗಿ ಆರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ.

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಹಾಗೂ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರೂ ಸಮಿತಿಯಲ್ಲಿ ಇದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, 'ಸರ್ಕಾರ ಮತ್ತು ಪಕ್ಷದ ಸಂಘಟನೆ ನಡುವೆ ಉತ್ತಮ ಸಮನ್ವಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಮಿತಿ ರಚಿಸುವ ಪ್ರಸ್ತಾವನೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ಸೂಚಿಸಿದ್ದಾರೆ' ಎಂದು ತಿಳಿಸಿದ್ದಾರೆ.

ADVERTISEMENT

ಹಿರಿಯ ನಾಯಕರಾದ ಕೌಲ್‌ ಸಿಂಗ್‌ ಠಾಕೂರ್‌, ಧನಿರಾಮ್‌ ಶಾಂಡಿಲ್‌ ಮತ್ತು ರಾಮ್‌ ಲಾಲ್‌ ಠಾಕೂರ್‌ ಅವರನ್ನೂ ಸಮಿತಿಯಲ್ಲಿ ಸೇರಿಸಲಾಗಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಆರು ಶಾಸಕರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಬಳಿಕ, ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸರ್ಕಾರಕ್ಕೆ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್‌ ಹೂಡಾ, ಛತ್ತೀಸಗಢ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕೇಂದ್ರೀಯ ವೀಕ್ಷಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರು  ಹಿಮಾಚಲಕ್ಕೆ ನಿಯೋಜಿಸಿದ್ದರು.

ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿರುವ ವೀಕ್ಷಕರ ತಂಡ, ಸಮನ್ವಯ ಸಮಿತಿ ರಚಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು.

ಅಡ್ಡಮತದಾನದ ಬಳಿಕ ಸರ್ಕಾರಕ್ಕೆ ಆತಂಕ
ಹಿಮಾಚಲ ವಿಧಾನಸಭೆಯು 68 ಸದಸ್ಯ ಬಲವನ್ನು ಹೊಂದಿದೆ. ಇಲ್ಲಿನ ಏಕೈಕ ರಾಜ್ಯಸಭೆ ಸ್ಥಾನಕ್ಕೆ ಫೆಬ್ರುವರಿ 27ರಂದು ನಡೆದ ಚುನಾವಣೆಗೂ ಮುನ್ನ ಕಾಂಗ್ರೆಸ್‌ 40 ಹಾಗೂ ಬಿಜೆಪಿ 25 ಶಾಸಕರನ್ನು ಹೊಂದಿದ್ದವು. ಉಳಿದ ಮೂವರು ಪಕ್ಷೇತರ ಶಾಸಕರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಆರು ಶಾಸಕರು ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್‌ ಪರ ಮತ ಹಾಕಿದ್ದರು. ಹೀಗಾಗಿ ಕಾಂಗ್ರೆಸ್‌ ಬಲ 34ಕ್ಕೆ ಕುಸಿದಿತ್ತು. ಇತ್ತ, ಮೂವರು ಪಕ್ಷೇತರರು ಹಾಗೂ ಕಾಂಗ್ರೆಸ್‌ ಬಂಡಾಯ ಶಾಸಕರ ಬೆಂಬಲದಿಂದಾಗಿ ಬಿಜೆಪಿ ಸಂಖ್ಯೆಯು ಕಾಂಗ್ರೆಸ್‌ಗೆ ಸಮವಾಗಿತ್ತು. ನಂತರ ಚೀಟಿ ಎತ್ತಿದಾಗ ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಗ್ವಿಗೆ ಅದೃಷ್ಟ ಕೈಕೊಟ್ಟಿತ್ತು.

ಇದರ ಬೆನ್ನಲ್ಲೇ ಸಿಎಂ ಸುಖ್ವಿಂದರ್‌ ಸಿಂಗ್‌ ಸುಖು ನೇತೃತ್ವದ ಸರ್ಕಾರ ಪತನಗೊಳ್ಳುವ ಆತಂಕವೂ ಎದುರಾಗಿತ್ತು. ಆದರೆ, ರಾಜ್ಯದ ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಮಂಡನೆ ವೇಳೆ ಸರ್ಕಾರದ ಪರ ಮತದಾನ ಮಾಡಬೇಕೆಂಬ ಪಕ್ಷದ ವಿಪ್ ಉಲ್ಲಂಘಿಸಿದ್ದ ಆರೋಪದಲ್ಲಿ ಕಾಂಗ್ರೆಸ್‌ನ 6 ಮಂದಿ ಬಂಡಾಯ ಶಾಸಕರನ್ನು ಸಭಾಧ್ಯಕ್ಷ ಕುಲದೀಪ್ ಸಿಂಗ್ ಪಟಾನಿಯಾ ಅನರ್ಹಗೊಳಿಸಿದ್ದರು.

ಹೀಗಾಗಿ ಕಾಂಗ್ರೆಸ್‌ ಶಾಸಕರ ಸಂಖ್ಯೆ 40 ರಿಂದ 32ಕ್ಕೆ ಮತ್ತು ವಿಧಾನಸಭೆ ಸದಸ್ಯ ಬಲ 68ರಿಂದ 62ಕ್ಕೆ ಕುಸಿದಿದೆ. ಇದರೊಂದಿಗೆ ಸುಖು ಅವರು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪಕ್ಷದಲ್ಲಿನ ಅಸಮಾಧಾನವೂ ಸಂಪೂರ್ಣ ಶಮನಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.