ಮುಂಬೈ: ನಾಂದೇಡ್ ಸರ್ಕಾರಿ ಆಸ್ಪತ್ರೆ ದುರಂತ ಸಂಬಂಧ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ದುರಂತದ ಬಗ್ಗೆ ಮರುಕ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಬಿಜೆಪಿ ಸರ್ಕಾರ ತನ್ನ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಮಕ್ಕಳ ಔಷಧಕ್ಕಾಗಿ ಹಣ ನೀಡುವುದಿಲ್ಲ. ಬಿಜೆಪಿ ದೃಷ್ಟಿಯಲ್ಲಿ ಬಡವರ ಜೀವಗಳಿಗೆ ಬೆಲೆ ಇಲ್ಲ' ಎಂದು ಗುಡುಗಿದ್ದಾರೆ.
ದುರಂತಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.
'ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿಂದ 12 ನವಜಾತ ಶಿಶುಗಳು ಸೇರಿದಂತೆ 24 ಜನರು ಮೃತಪಟ್ಟಿರುವ ದುಃಖದ ವಿಚಾರ ತಿಳಿಯಿತು. ಮೃತರ ಆತ್ಮಗಳಿಗೆ ದೇವರು ಶಾಂತಿ ನೀಡಲಿ. ಅವರನ್ನು ಕಳೆದುಕೊಂಡ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ದುರಂತಕ್ಕೆ ಹೊಣೆಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು' ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದು ಅತ್ಯಂತ ಗಂಭೀರವಾದ ವಿಚಾರ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ. ಸರ್ಕಾರವು ಪ್ರಚಾರಕ್ಕಿಂತ ಮಿಗಿಲಾಗಿ ತಳಮಟ್ಟದಿಂದ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.
24 ತಾಸಿನಲ್ಲಿ 24 ಸಾವು
ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ಜನರು, 24 ತಾಸಿನಲ್ಲಿ ಮೃತಪಟ್ಟಿರುವುದು ಸೋಮವಾರ ವರದಿಯಾಗಿದೆ. ತನಿಖೆಗೆ ಮೂವರು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಒಂದು ದಿನದಿಂದ ನಾಲ್ಕು ದಿನದ ಒಳಗಿನ 12 ನವಜಾತ ಶಿಶುಗಳು ಮೃತಪಟ್ಟಿವೆ. ತಲಾ ಆರು ಮಂದಿ ಪುರುಷರು ಹಾಗೂ ಮಹಿಳೆಯರು ಕೂಡ ಸಾವಿಗೀಡಾಗಿದ್ದಾರೆ. ಇವರಲ್ಲಿ ಹಲವರು ಹಾವಿನ ಕಡಿತಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದರು’ ಎಂದು ಆಸ್ಪತ್ರೆಯ ಡಾ.ಶ್ಯಾಮರಾವ್ ವಾಕೋಡೆ ತಿಳಿಸಿದ್ದಾರೆ.
500 ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯವನ್ನು ಈ ಆಸ್ಪತ್ರೆ ಹೊಂದಿದೆ. ಆದರೆ, ಇಲ್ಲಿ 1,200ಕ್ಕೂ ಅಧಿಕ ರೋಗಿಗಳು ಇದ್ದಾರೆ.
ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಒತ್ತಾಯಿಸಿದೆ. ಆರೋಗ್ಯ ಸಚಿವ ಡಾ.ತಾನಾಜಿ ಸಾವಂತ್ ವಿರುದ್ಧವೂ ವಾಗ್ದಾಳಿ ನಡೆಸಿದೆ.
‘ಇದೊಂದು ದುರದೃಷ್ಟಕರ ಘಟನೆ’ ಎಂದು ಶಿಂದೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.