ನವದೆಹಲಿ:ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಕಡಿತಗೊಳಿಸಿಲ್ಲ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಬುಧವಾರ ತಿರುಗೇಟು ನೀಡಿದೆ. ಅಬಕಾರಿ ಸುಂಕವು ಯುಪಿಎ ಸರ್ಕಾರದ ಅವಧಿಯಲ್ಲಿ ಈಗಿರುವುದಕ್ಕಿಂತಲೂ ಕಡಿಮೆಯಿತ್ತು ಮತ್ತು ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ.
'ಮೋದಿಜೀ, ಯಾವುದೇ ಟೀಕೆಗಳಿಲ್ಲ, ಗೊಂದಲಗಳಿಲ್ಲ, ಸುಳ್ಳುಗಳಿಲ್ಲ! ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸುಂಕವು ಲೀಟರ್ ಪೆಟ್ರೋಲ್‌ಗೆ ₹ 9.48 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 3.56 ಇತ್ತು. ಆದರೆ, ಮೋದಿ ಸರ್ಕಾರದ ಅಡಿಯಲ್ಲಿ ಲೀಟರ್ ಪೆಟ್ರೋಲ್‌ಗೆ ₹ 27.90 ಮತ್ತು ಲೀಟರ್ ಡೀಸೆಲ್‌ಗೆ ₹ 21.80 ಇದೆ. ದಯವಿಟ್ಟು ಪೆಟ್ರೋಲ್ ಮೇಲಿನ ₹ 18.42 ಮತ್ತು ಡೀಸೆಲ್ ಮೇಲಿನ ₹ 18.24 ಅಬಕಾರಿ ಹೆಚ್ಚಳವನ್ನು ಹಿಂಪಡೆಯಿರಿ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಸಹ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳ ಆಡಳಿವಿರುವ ರಾಜ್ಯಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಾಗ್ದಾಳಿ ನಡೆಸಿದ್ದರು.
ಕಡಿತದ ಲಾಭವನ್ನು ರಾಜ್ಯಗಳು ಜನರಿಗೆ ವರ್ಗಾಯಿಸದೆ 'ಅನ್ಯಾಯ' ಮಾಡಿವೆ ಎಂದು ದೂರಿದ್ದರು.
ದೇಶದಲ್ಲಿ ಏರಿಕೆಯಾಗುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಥಿತಿಗತಿ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಜನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು.
'ಯುದ್ಧದ ಪರಿಸ್ಥಿತಿಯು ಉದ್ಭವಿಸಿದೆ, ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ ಮತ್ತು ಇಂತಹ ವಾತಾವರಣದಲ್ಲಿ ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಜಾಗತಿಕ ಬಿಕ್ಕಟ್ಟು ಅನೇಕ ಸವಾಲುಗಳನ್ನು ತರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರ ಒಕ್ಕೂಟ ಮತ್ತು ಸಮನ್ವಯದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.