ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಓಡಾಟಕ್ಕೆ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಹೊಸ ಕಾರು ಖರೀದಿಸಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಐಷರಾಮಿ ಕಾರಿನಲ್ಲಿ ಓಡಾಡಲು ಬಯಸುವವರು ಪ್ರಧಾನಿ ನರೇಂದ್ರ ಮೋದಿ ಅವರಂತೆ ಫಕೀರರಾದರೆ ಸಾಕು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
‘ಮೋದಿ ತಮ್ಮನ್ನು ತಾವು ಫಕೀರ, ಸಂತ ಎಂದೆಲ್ಲಾ ಕರೆದುಕೊಳ್ಳುತ್ತಾರೆ. ಆದರೆ ಮೋದಿ ₹8,000 ಬೆಲೆಯ ವಿಮಾನ, ₹20 ಕೋಟಿಯ ಕಾರಿನಲ್ಲಿ ಓಡಾಡುತ್ತಾರೆ. ಮನೆ ನಿರ್ಮಿಸಲು ₹2,000 ಕೋಟಿ ವೆಚ್ಚ ಮಾಡುತ್ತಾರೆ. ಹೀಗೆ ಐಷಾರಾಮಿ ಬದುಕು, ಬದುಕಲು ಎಲ್ಲರೂ ಮೋದಿ ಅವರಂತೆ ಸಂತರಾಗಬೇಕು’ ಎಂದು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಲೇವಡಿ ಮಾಡಿದ್ದಾರೆ.
‘ಎರಡು ವರ್ಷಗಳಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ವೇತನ ಕಡಿತವಾಗಿದೆ. ದೇಶದಾದ್ಯಂತ ಉದ್ಯಮಗಳ ವಹಿವಾಟು ಕುಸಿದಿದೆ. ಆದರೆ ಆಗ್ಗಾಗ್ಗೆ ಕಾರು ಬದಲಿಸುವ ಪ್ರಧಾನಿಯವರ ಕ್ರಮ ಮಾತ್ರ ಬದಲಾಗಿಲ್ಲ.ಎಸ್‌ಪಿಜಿ ನಿಯಮಗಳ ಪ್ರಕಾರ ಪ್ರಧಾನಿ ಅವರ ಓಡಾಟಕ್ಕೆ ಬಳಸುವ ಕಾರನ್ನು ಪ್ರತಿ ಆರು ವರ್ಷಕ್ಕೆ ಒಮ್ಮೆ ಬದಲಿಸಲಾಗುತ್ತದೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ಅವರ ಓಡಾಟಕ್ಕೆ ಬಿಎಂಡಬ್ಲ್ಯು 7 ಸೀರಿಸ್ ಸೆಡಾನ್ ಬಳಸಲಾಗುತ್ತಿತ್ತು. 2017ರಲ್ಲಿ ಟೊಯೋಟಾ ಲ್ಯಾಂಡ್ ಕ್ರೂಸರ್ ಖರೀದಿಸಲಾಯಿತು. 2019ರಲ್ಲಿ ಲ್ಯಾಂಡ್ ರೋವರ್ ಎಸ್‌ಯುವಿ ಖರೀದಿಸಲಾಯಿತು. ಈಗ 2021ರಲ್ಲಿ ಮರ್ಸಿಡೆಸ್ ಬೆಂಜ್ ಎಸ್ ಕ್ಲಾಸ್ ಖರೀದಿಸಲಾಗಿದೆ. ನೀವು ಕಾರನ್ನು ಖರೀದಿಸುವುದಾದರೂ ಏಕೆ?’ ಎಂದು ಗೌರವ್ ವಲ್ಲಭ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.