ADVERTISEMENT

ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಿದ ಐ.ಟಿ

ಷರತ್ತಿಗೆ ಅನುಗುಣವಾಗಿ ಖಾತೆ ಬಳಕೆಗೆ ಮೇಲ್ಮನವಿ ನ್ಯಾಯಮಂಡಳಿ ಅನುಮತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 16:09 IST
Last Updated 16 ಫೆಬ್ರುವರಿ 2024, 16:09 IST
ಐಟಿ ಇಲಾಖೆಯ ಈ ಕ್ರಮ ಖಂಡಿಸಿ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ನೇತೃತ್ವದಲ್ಲಿ ಕಾರ್ಯಕರ್ತರು ಸಂಸತ್‌ ಸಮೀಪದಲ್ಲಿ ಪ್ರತಿಭಟನೆ ನಡೆಸಿದರು
ಐಟಿ ಇಲಾಖೆಯ ಈ ಕ್ರಮ ಖಂಡಿಸಿ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ನೇತೃತ್ವದಲ್ಲಿ ಕಾರ್ಯಕರ್ತರು ಸಂಸತ್‌ ಸಮೀಪದಲ್ಲಿ ಪ್ರತಿಭಟನೆ ನಡೆಸಿದರು   

ನವದೆಹಲಿ: 2018-19ನೆಯ ಸಾಲಿಗೆ ಸಂಬಂಧಿಸಿದಂತೆ ₹201 ಕೋಟಿ ಆದಾಯ ತೆರಿಗೆ ಪಾವತಿಸಬೇಕು ಎಂದು ನೋಟಿಸ್ ನೀಡಿದ್ದ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷದ ಒಂಬತ್ತು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು (ಐಟಿಎಟಿ) ಪಕ್ಷಕ್ಕೆ ಬ್ಯಾಂಕ್‌ ಖಾತೆಗಳನ್ನು ಬಳಸಲು ಶುಕ್ರವಾರ ಅನುವು ಮಾಡಿಕೊಟ್ಟಿತು.

ಇಲಾಖೆಯ ಕ್ರಮದಿಂದ ಪಕ್ಷದ ಎಲ್ಲ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ಕಾಂಗ್ರೆಸ್‌ ದೂರಿದೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಪಕ್ಷವು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಟೀಕಿಸಿದೆ.

ಖಾತೆಯಲ್ಲಿ ₹115 ಕೋಟಿ ಹಣವನ್ನು ಉಳಿಸಿಕೊಳ್ಳಬೇಕು ಎಂದು ಐಟಿಎಟಿ, ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿದೆ. ಆದರೆ, ಕಾಂಗ್ರೆಸ್‌ ಪಕ್ಷವು ತನ್ನ ಖಾತೆಯಲ್ಲಿ ಅಷ್ಟು ಹಣ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ADVERTISEMENT

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಖಜಾಂಚಿ ಅಜಯ್‌ ಮಾಕನ್‌, ‘ಬ್ಯಾಂಕ್‌ ಖಾತೆಯಲ್ಲಿ ₹115 ಕೋಟಿ ಇರಬೇಕು ಎಂಬ ಹೊಣೆಯನ್ನು ನ್ಯಾಯಮಂಡಳಿ ವಿಧಿಸಿದೆ. ನಾವು ಆ ಮೊತ್ತಕ್ಕಿಂತ ಹೆಚ್ಚಿರುವುದನ್ನು ಮಾತ್ರ ವ್ಯಯಿಸಬಹುದು. ಇದರ ಅರ್ಥ ಈ ₹115 ಕೋಟಿ ಬಳಕೆಗೆ ಸಿಗುವುದಿಲ್ಲ. ಇದು ನಮ್ಮ ಚಾಲ್ತಿ ಖಾತೆಯಲ್ಲಿರುವ ಮೊತ್ತಕ್ಕಿಂತ ಹೆಚ್ಚಿನದ್ದುʼ ಎಂದು ಹೇಳಿದ್ದಾರೆ.

ಅಜಯ್‌ ಮಾಕನ್‌ ಶುಕ್ರವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ ಆಫ್‌ ಬರೋಡಾ ಹಾಗೂ ಕೆನರಾ ಬ್ಯಾಂಕ್‌ನ ನಾಲ್ಕು ಖಾತೆಗಳನ್ನು ಸ್ಥಗಿತಗೊಳಿಸಿದೆ’ ಎಂದು ಮಾಹಿತಿ ನೀಡಿದರು. ಆದರೆ, ಒಂಬತ್ತು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವಿವರವನ್ನು ಪಕ್ಷದ ಮೂಲಗಳು ನಂತರ ನೀಡಿದವು.

2018–19ನೇ ಸಾಲಿನಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸುವಲ್ಲಿ 40-45 ದಿನಗಳ ವಿಳಂಬ ಮಾಡಿರುವ ಆರೋಪದ ಮೇಲೆ ಹಾಗೂ ಆ ಸಾಲಿನಲ್ಲಿ ಸಂಸದರು ಮತ್ತು ಶಾಸಕರು ನಗದು ರೂಪದಲ್ಲಿ ₹14.40 ಲಕ್ಷ ನೀಡಿದ್ದ ವಿಚಾರವಾಗಿ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್‌ ಜಾರಿಗೊಳಿಸಿತ್ತು. ಆ ವರ್ಷದಲ್ಲಿ ಪಕ್ಷದ ಒಟ್ಟು ಸ್ವೀಕೃತಿಯ ಮೊತ್ತ ₹199 ಕೋಟಿ ಆಗಿತ್ತು ಎಂದು ಮಾಕನ್ ತಿಳಿಸಿದರು.‌

‘ಇಲಾಖೆಯು ಸ್ಥಗಿತಗೊಳಿಸಿರುವುದು ನಮ್ಮ ಖಾತೆಯನ್ನಷ್ಟೇ ಅಲ್ಲ. ಇದರಿಂದ ದೇಶದ ಸಂಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಣೆಗೆ ಕೇವಲ ಎರಡು ವಾರಗಳಿರುವಾಗ ಪ್ರಮುಖ ವಿರೋಧ ಪಕ್ಷದ ಖಾತೆಗಳು ಸ್ಥಗಿತಗೊಳ್ಳುತ್ತವೆ ಎಂದಾದಲ್ಲಿ, ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆಯೇ ಎಂದು ನೀವೇ ಆಲೋಚಿಸಿ’ ಎಂದು ಅವರು ಕಿಡಿಕಾರಿದರು.

‘ದೇಶದಲ್ಲಿ ಏಕ-ಪಕ್ಷದ ಆಡಳಿತ ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ ಅವರು, ‘ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ನಮಗೆ ಈಗ ವಿದ್ಯುತ್‌ ಶುಲ್ಕ ಹಾಗೂ ವೇತನಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಭಾರತ್‌ ಜೋಡೊ ನ್ಯಾಯ ಯಾತ್ರೆಯ ನಿರ್ವಹಣೆಗೆ ಹಣ ಬಳಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿರುವ ಹಣವು ಕಾರ್ಪೊರೇಟ್ ಕಂಪನಿ, ಬಾಂಡ್‌ಗಳು ಅಥವಾ ದೊಡ್ಡ-ದೊಡ್ಡ ಸಂಸ್ಥೆಗಳಿಂದ ಬರುವ ಹಣ ಅಲ್ಲ. ಇದು ಕ್ರೌಡ್‌ಫಂಡಿಂಗ್‌ನಿಂದ ಬಂದ ಹಣ. ನಾವು ನಮ್ಮ ಕಾರ್ಯಕರ್ತರ ಕ್ರೌಡ್‌ಫಂಡಿಂಗ್‌ನಿಂದ ₹25 ಕೋಟಿ ಸಂಗ್ರಹಿಸಿದ್ದೇವೆ. ಇದರಲ್ಲಿ ಶೇ 95ರಷ್ಟು ಮೊತ್ತ ₹100ಕ್ಕಿಂತ ಕಡಿಮೆ ಮೊತ್ತದ ದೇಣಿಗೆಯಾಗಿವೆ. ಇದನ್ನು ಯುಪಿಐ ಮೂಲಕ ಕಾನೂನುಬದ್ಧವಾಗಿ ಮಾಡಲಾಗಿದೆ. ಆನ್‌ಲೈನ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಲಾಗಿದೆ. ನಗದು ಹಣ ಸ್ವೀಕರಿಸಲಾಗಿಲ್ಲ. ಆದರೆ, ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ₹6,500 ಕೋಟಿ ಸಂಗ್ರಹಿಸಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ಈ ಘಟನೆ ನಂತರ ದೇಣಿಗೆಸಂಗ್ರಹ ನಿಲ್ಲಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲ್ಲ, ಅದು ಮುಂದುವರಿಯಲಿದೆ’ ಎಂದು ವಿವರಿಸಿದರು.

ಐ.ಟಿ ಇಲಾಖೆಯ ಈ ಕ್ರಮ ಖಂಡಿಸಿ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ನೇತೃತ್ವದಲ್ಲಿ ಕಾರ್ಯಕರ್ತರು ಸಂಸತ್‌ ಸಮೀಪದಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ, ರಾಜ್ಯ ಘಟಕಗಳು ಐ.ಟಿ ಕಚೇರಿಗಳ ಎದುರು ಶನಿವಾರ ಪ್ರತಿಭಟನೆ ನಡೆಸಲಿವೆ.

ಖರ್ಗೆ, ರಾಹುಲ್ ಕಿಡಿ :

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಐ.ಟಿ. ಇಲಾಖೆಯು ಖಾತೆಗಳನ್ನು ಸ್ಥಗಿತಗೊಳಿಸಲು ಆಯ್ಕೆ ಮಾಡಿಕೊಂಡ ಸಮಯವನ್ನು ಪ್ರಶ್ನಿಸಿದರು. ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ವಾರಗಳು ಮಾತ್ರ ಇರುವಾಗ ಐ.ಟಿ. ಇಲಾಖೆಯು ಖಾತೆ ಸ್ಥಗಿತದ ಕ್ರಮ ಕೈಗೊಂಡಿತ್ತು. ‘ಅಧಿಕಾರದ ಮದವೇರಿರುವ ನರೇಂದ್ರ ಮೋದಿ ನೇತೃತ್ವ ಸರ್ಕಾರವು ದೇಶದ ಅತಿದೊಡ್ಡ ವಿರೋಧ ಪಕ್ಷದ ಖಾತೆಗಳನ್ನು ಲೋಕಸಭಾ ಚುನಾವಣೆ ಹತ್ತಿರವಾಗಿರುವ ಹೊತ್ತಿನಲ್ಲಿ ಸ್ಥಗಿತಗೊಳಿಸಿದೆ. ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಮೇಲಿನ ದಾಳಿ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಬಾಂಡ್‌ ಯೋಜನೆಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿರುವುದರ ಬಗ್ಗೆ ಉಲ್ಲೇಖಿಸಿದ ಖರ್ಗೆ ಬಿಜೆಪಿಯುವರು ತಾವು ಸಂಗ್ರಹಿಸಿದ ‘ಅಸಾಂವಿಧಾನಿಕ ಹಣವನ್ನು’ ಬಳಸಿಕೊಳ್ಳುತ್ತಾರೆ ಆದರೆ ಕಾಂಗ್ರೆಸ್ ಪಕ್ಷವು ದೇಣಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಬಳಸದಂತೆ ತಡೆಯುತ್ತಾರೆ ಎಂದು ಕಿಡಿಕಾರಿದರು. ‘ಈ ಕಾರಣಕ್ಕಾಗಿಯೇ ನಾನು ಮುಂದೆ ಎಂದೂ ಚುನಾವಣೆಗಳು ನಡೆಯುವುದಿಲ್ಲ ಎಂದು ಹೇಳಿದ್ದೇನೆ. ಈ ದೇಶದ ಬಹುಪಕ್ಷೀಯ ವ್ಯವಸ್ಥೆಯನ್ನು ಉಳಿಸುವಂತೆ ದೇಶದ ಪ್ರಜಾತಂತ್ರವನ್ನು ರಕ್ಷಿಸುವಂತೆ ನಾವು ನ್ಯಾಯಾಂಗವನ್ನು ಕೋರುತ್ತೇವೆ. ಈ ಸರ್ವಾಧಿಕಾರದ ವಿರುದ್ಧ ನಾವು ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ. ‘ಮೋದಿಯವರೇ ಹೆದರಬೇಡಿ. ಕಾಂಗ್ರೆಸ್ ಅಂದರೆ ಹಣದ ಬಲ ಅಲ್ಲ. ಕಾಂಗ್ರೆಸ್ ಅಂದರೆ ಜನರ ಬಲ. ಸರ್ವಾಧಿಕಾರದ ಮುಂದೆ ನಾವು ಯಾವತ್ತೂ ತಲೆಬಾಗಿಲ್ಲ. ತಲೆ ಬಾಗುವುದೂ ಇಲ್ಲ. ದೇಶದ ಪ್ರಜಾತಂತ್ರವನ್ನು ರಕ್ಷಿಸಲು ಕಾಂಗ್ರೆಸ್ಸಿನ ಪ್ರತಿಯೊಬ್ಬ ಕಾರ್ಯಕರ್ತನೂ ಕಠಿಣ ಹೋರಾಟ ನಡೆಸಲಿದ್ದಾನೆ’ ಎಂದು ರಾಹುಲ್ ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.