ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆರೋಪ: 7 ದಿನ ಕಾಲಾವಕಾಶ ಕೋರಿದ ಬಿಜೆಪಿ, ಕಾಂಗ್ರೆಸ್‌

ಪಿಟಿಐ
Published 18 ನವೆಂಬರ್ 2024, 14:32 IST
Last Updated 18 ನವೆಂಬರ್ 2024, 14:32 IST
ಕಾಂಗ್ರೆಸ್‌ ಮತ್ತು ಬಿಜೆಪಿ
ಕಾಂಗ್ರೆಸ್‌ ಮತ್ತು ಬಿಜೆಪಿ   

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಜಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಲು ಏಳು ದಿನ ಕಾಲಾವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ  ಕಾಂಗ್ರೆಸ್‌ ಮತ್ತು ಬಿಜೆಪಿ ಮನವಿ ಮಾಡಿವೆ.

ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ದೂರು ದಾಖಲಿಸಿದ್ದವು. ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗವು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶನಿವಾರ ನೋಟಿಸ್ ನೀಡಿತ್ತು.

ಸೋಮವಾರ ಮಧ್ಯಾಹ್ನ 1 ಗಂಟೆಯ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಆಯೋಗ ಸೂಚಿಸಿತ್ತು. ಆದರೆ ಎರಡೂ ಪಕ್ಷಗಳು ಹೆಚ್ಚುವರಿ ಕಾಲಾವಕಾಶವನ್ನು ನೀಡುವಂತೆ ಮನವಿ ಮಾಡಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಸುಳ್ಳು ಆರೋಪಗಳ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ನಿರಾಧಾರ ಆರೋಪ ಮಾಡಿದ್ದಾರೆ ಎಂದು ಬಿಜೆಪಿಯೂ ದೂರು ದಾಖಲಿಸಿತ್ತು.

ತಾರಾ ಪ್ರಚಾರಕರು ಮತ್ತು ನಾಯಕರು ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡದಂತೆ ಎಚ್ಚರವಹಿಸುವುದು ಪಕ್ಷದ ಜವಾಬ್ದಾರಿ ಎಂದು ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯ ಬಗ್ಗೆ ಆಯೋಗವು ಎರಡೂ ಪಕ್ಷಗಳಿಗೆ ನೆನಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.