ADVERTISEMENT

ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ: ಮೋದಿ ಹೇಳಿಕೆಗೆ ಕಾಂಗ್ರೆಸ್‌ ವ್ಯಂಗ್ಯ

ಏಜೆನ್ಸೀಸ್
Published 27 ಮಾರ್ಚ್ 2021, 1:49 IST
Last Updated 27 ಮಾರ್ಚ್ 2021, 1:49 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: 'ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆ' ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಪಕ್ಷದ ನಾಯಕರು ವ್ಯಂಗ್ಯವಾಡಿದ್ದಾರೆ.

ಬಾಂಗ್ಲಾದೇಶ ಸ್ವಾತಂತ್ರ್ಯೋತ್ಸವದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋದಿ, 'ನನಗೆ ಆಗ 20–22 ವರ್ಷ ಇರಬಹುದೇನೋ. ನಾನು ಮತ್ತು ನನ್ನ ಸಹಪಾಠಿಗಳು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆವು’ ಎಂದು ಹೇಳಿಕೆ ನೀಡಿದ್ದರು.

ಮೋದಿ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, 'ನಮ್ಮ ಪ್ರಧಾನಿ ಬಾಂಗ್ಲಾದೇಶಕ್ಕೆ ಭಾರತದ 'ನಕಲಿ ಸುದ್ದಿಗಳ' ರುಚಿಯನ್ನು ತೋರಿಸುತ್ತಿದ್ದಾರೆ. ಅಸಂಬದ್ಧವೆಂದರೆ, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದವರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ' ಎಂದಿದ್ದಾರೆ.

ADVERTISEMENT

ಕಾಂಗ್ರೆಸ್ಸಿನ ಮತ್ತೊಬ್ಬ ಮುಖಂಡ ಜೈರಾಮ್ ರಮೇಶ್ ಅವರು ಮೋದಿಯವರ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ 'ಇದು ನರೇಂದ್ರ ಮೋದಿಯವರ ಸಂಪೂರ್ಣ ರಾಜಕೀಯ ಶಾಸ್ತ್ರ' ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, 'ಪ್ರಧಾನಿ ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಜನಸಂಘವು ಆಯೋಜಿಸಿದ್ದ ಸತ್ಯಾಗ್ರಹದ ಭಾಗವಾಗಿದ್ದರು' ಎಂದು ಹೇಳಿದ್ದಾರೆ.

'ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಆಯೋಜಿಸಲಾಗಿದ್ದ ಸತ್ಯಾಗ್ರಹದ ಸಮಯದಲ್ಲಿ ಪ್ರಧಾನಿ ಮೋದಿ ತಿಹಾರ್‌ ಜೈಲಿಗೆ ಹೋಗಿದ್ದರು. 1978ರಲ್ಲಿ ಬರೆದ ಪುಸ್ತಕವೊಂದರಲ್ಲಿ ಈ ಬಗ್ಗೆ ಉಲ್ಲೇಖವಿದೆ' ಎಂದು ಮಾಳವೀಯ ತಿಳಿಸಿದ್ದಾರೆ. ಪುಸ್ತಕದ ಸ್ಕ್ರೀನ್‌ಶಾಟ್‌ ಅನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.