ADVERTISEMENT

ಹಿಮಾಚಲ | ಕೇಂದ್ರ ಸಹಾಯವಿಲ್ಲದೆ ಕಾಂಗ್ರೆಸ್‌ ಆಡಳಿತ ನಡೆಸಲು ಸಾಧ್ಯವಿಲ್ಲ: ನಡ್ಡಾ

ಪಿಟಿಐ
Published 4 ಅಕ್ಟೋಬರ್ 2024, 11:35 IST
Last Updated 4 ಅಕ್ಟೋಬರ್ 2024, 11:35 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಬಿಲಾಸ್‌ಪುರ: ಕೇಂದ್ರದ ಸಹಾಯವಿಲ್ಲದೆ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶದಲ್ಲಿ ಒಂದು ದಿನವೂ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.

ಬಿಲಾಸ್‌ಪುರದಲ್ಲಿ ರಾಜ್ಯ ಬಿಜೆಪಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ₹500 ಕೋಟಿ ಆದಾಯ ಕೊರತೆ ಅನುದಾನ ಮತ್ತು ಸಂಬಳ ಹಾಗೂ ಪಿಂಚಣಿ ಪಾವತಿಗಾಗಿ ₹800 ಕೋಟಿ ಅನುದಾನ ನೀಡಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಎರಡು ರೀತಿಯಾಗಿ ಮಾತನಾಡುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಚುನಾವಣೆ ವೇಳೆ, ರಾಜ್ಯ ಸರ್ಕಾರ ಕೇಂದ್ರದಿಂದ ಏನನ್ನೂ ಪಡೆದುಕೊಂಡಿಲ್ಲ ಎಂದು ಹೇಳುತ್ತಾರೆ. ಏತನ್ಮಧ್ಯೆ ದೆಹಲಿಯಲ್ಲಿ ಕೇಂದ್ರದ ಹಣಕಾಸು ಸಹಾಯಕ್ಕಾಗಿ ಧನ್ಯವಾದ ತಿಳಿಸುತ್ತಾರೆ’ ಎಂದು ನಡ್ಡಾ ವಾಗ್ದಾಳಿ ನಡೆಸಿದರು.

ADVERTISEMENT

‘ಕೇಂದ್ರದ ಸಹಾಯವಿಲ್ಲದೆ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶದಲ್ಲಿ ಒಂದು ದಿನವೂ ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ, ಹಣ ಯಾವುದಕ್ಕಾಗಿ ಖರ್ಚಾಗುತ್ತಿದೆ ಎಂಬುದಕ್ಕೆ ರಾಜ್ಯ ಸರ್ಕಾರದ ಬಳಿ ದಾಖಲೆಗಳಿಲ್ಲ’ ಎಂದು ನಡ್ಡಾ ಕಿಡಿಕಾರಿದರು.

‘ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಮಾದಕ ವ್ಯಸನ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕಾಂಗ್ರೆಸ್‌ ನಾಯಕರೊಬ್ಬರಿಗೆ ಸೇರಿದ ₹5,600 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಂಗ್ರೆಸ್‌ ಎಂದರೆ, ಭ್ರಷ್ಟಾಚಾರ, ಅಪರಾಧೀಕರಣ ಮತ್ತು ಕಮಿಷನ್‌ ಎಂದರ್ಥ’ ಎಂದು ನಡ್ಡಾ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.