ADVERTISEMENT

ವಯನಾಡ್‌ನಿಂದ ಪ್ರಿಯಾಂಕಾ ಸ್ಪರ್ಧೆ: ಗೆದ್ದರೆ ಸಂಸತ್‌ನಲ್ಲಿ ಗಾಂಧಿ ಕುಟುಂಬದ ಮೂವರು

ಪಿಟಿಐ
Published 17 ಜೂನ್ 2024, 16:26 IST
Last Updated 17 ಜೂನ್ 2024, 16:26 IST
<div class="paragraphs"><p>ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ</p></div>

ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿಯನ್ನು ಅಣ್ಣ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ, ಈಗ ವಯನಾಡ್ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಅಣಿಯಾಗುವ ಮೂಲಕ ತಮ್ಮ ಚೊಚ್ಚಲ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.

ADVERTISEMENT

ಸಕ್ರಿಯ ರಾಜಕಾರಣಕ್ಕೆ 2019ರಲ್ಲೇ ಪದಾರ್ಪಣೆ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಎದುರಾಳಿ ಎಂದೇ ಬಿಂಬಿತವಾಗಿದ್ದರು. ನಂತರ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ನಂತರ ಸ್ಪರ್ಧಿಸುವ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡವರು.

ಅಮೇಠಿಯಲ್ಲಿ ಸೋಲಿನ ಭೀತಿಯಲ್ಲಿದ್ದಾಗ ರಾಹುಲ್ ಗಾಂಧಿ ಕೈಹಿಡಿದ ಕ್ಷೇತ್ರ ವಯನಾಡ್. ಇದೇ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಅವರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಂತೂ ಭಾರೀ ಅಂತರದ ಗೆಲುವನ್ನು ಅಲ್ಲಿನ ಮತದಾರರು ರಾಹುಲ್‌ಗೆ ನೀಡಿದ್ದರು. ಎರಡು ಕ್ಷೇತ್ರಗಳಲ್ಲಿ ಒಂದನ್ನು ಉಳಿಸಿಕೊಳ್ಳುವ ಜರೂರು ಎದುರಾದಾಗ, ಪಕ್ಷದ ವರಿಷ್ಠರ ಸಭೆ ನಡೆಸಿ ರಾಯ್‌ಬರೇಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಇದರಿಂದಾಗಿ 52 ವರ್ಷದ ಪ್ರಿಯಾಂಕಾ ಅವರು ವಯನಾಡ್ ಮೂಲಕ ಚುನಾವಣಾ ರಾಜಕೀಯಕ್ಕೆ ಧುಮುಕುತ್ತಿದ್ದಾರೆ.

‘ನಾನೇನು ಭಯಗೊಂಡಿಲ್ಲ... ಬದಲಿಗೆ ವಯನಾಡ್‌ ಅನ್ನು ಪ್ರತಿನಿಧಿಸಲು ಸಂತೋಷವಾಗಿದೆ. ರಾಹುಲ್ ಅನುಪಸ್ಥಿತಿಯನ್ನು ಕ್ಷೇತ್ರದ ಜನರು ಎಂದೂ ಭಾವಿಸದಂತೆ ನಾನು ಕೆಲಸ ಮಾಡಬೇಕಿದೆ. ರಾಯ್‌ಬರೇಲಿಯಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅಲ್ಲಿನ ಜನರೊಂದಿಗೆ ನನಗೆ ಉತ್ತಮ ಒಡನಾಟವಿದೆ. ಅದು ಎಂದಿಗೂ ಕೊನೆಯಾಗದು’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಉದ್ಯಮಿ ರಾಬರ್ಟ್‌ ವಾದ್ರಾ ಅವರನ್ನು ವರಿಸಿರುವ ಪ್ರಿಯಾಂಕಾ  ಅವರು ಅಮೇಠಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಗಾಂಧಿ ಕುಟುಂಬದ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ಅವರನ್ನು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿಸಲಾಗಿತ್ತು.

ವಯನಾಡ್‌ನಲ್ಲಿ ಪ್ರಿಯಾಂಕಾ ಗೆಲುವು ಸಾಧ್ಯವಾದರೆ, ಗಾಂಧಿ ಕುಟುಂಬದ ಮೂವರ ಸಂಸತ್ತಿನಲ್ಲಿರಲಿದ್ದಾರೆ. ಇಂಥ ಸನ್ನಿವೇಶ ಇದೇ ಮೊದಲು. ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

‘ಬಹಳ ಸಮಯಗಳ ನಂತರ ಅತ್ಯಂತ ಯಶಸ್ವಿ ಚುನಾವಣಾ ಪ್ರಚಾರವನ್ನು 2024ರಲ್ಲಿ ಕಾಂಗ್ರೆಸ್ ಕಂಡಿತು. ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಗಳಿಗೆ ಸರಿಯಾದ ತಿರಗೇಟು ನೀಡಲು ಪ್ರಿಯಾಂಕಾಗೆ ಮಾತ್ರ ಸಾಧ್ಯ ಎಂಬ ಮಾತುಗಳು ಕೇಳಿ ಬಂದಿದ್ದವು. ಮೀನು, ಮಾಂಸ, ಮಂಗಳಸೂತ್ರ ಆರೋಪಗಳಿಗೆ ಪ್ರಿಯಾಂಕಾ ತಿರುಗೇಟು ನೀಡಿದ್ದರು’ ಎಂದು ಲೇಖಕ ರಶೀದ್ ಕಿದ್ವಾಯಿ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ 99 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಆ ಮೂಲಕ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು 233 ಕ್ಷೇತ್ರಗಳನ್ನು ಗೆದ್ದುಕೊಂಡಿತು.

ಪ್ರಿಯಾಂಕಾ ಸ್ಪರ್ಧೆ ಸ್ವಾಗತಿಸಿದ ಕೇರಳ ಕಾಂಗ್ರೆಸ್

ರಾಹುಲ್ ಗಾಂಧಿ ಅವರ ರಾಯ್‌ಬರೇಲಿ ಕ್ಷೇತ್ರವನ್ನು ಇಟ್ಟುಕೊಳ್ಳಲು ನಿರ್ಧರಿಸಿದ್ದರಿಂದ, ತೆರವಾಗುವ ವಯನಾಡ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸುತ್ತಿರುವುದನ್ನು ಕೇರಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಡಿ.ಸತೀಶನ್ ಸ್ವಾಗತಿಸಿದ್ದಾರೆ.

‘ರಾಹುಲ್ ಮತ್ತು ಪಕ್ಷವು ಪ್ರಿಯಾಂಕಾ ಅವರ ಹೆಸರನ್ನು ಅಂತಿಮಗೊಳಿಸಿದೆ. ಅವರು ವಯನಾಡ್‌ಗೆ ಇನ್ನಷ್ಟು ಹತ್ತಿರದವರಾಗಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ದಾಖಲೆಯ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ’ ಎಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಶೇ 64.7ರಷ್ಟು ಮತ ಪಡೆದಿದ್ದರು. ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಅನ್ನಿ ರಾಜಾ ಅವರ ವಿರುದ್ಧ 3.64 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು 1.3ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.