ADVERTISEMENT

ಭಾರತ್ ಜೋಡೊ ನ್ಯಾಯ ಯಾತ್ರೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪಿಟಿಐ
Published 20 ಜನವರಿ 2024, 9:34 IST
Last Updated 20 ಜನವರಿ 2024, 9:34 IST
   

ನವದೆಹಲಿ: ಅಸ್ಸಾಂನಲ್ಲಿ ಸಾಗುತ್ತಿರುವ ಭಾರತ್ ಜೋಡೊ ನ್ಯಾಯ ಯಾತ್ರೆ ಮೇಲೆ 'ಬಿಜೆಪಿಯ ಗೂಂಡಾಗಳು' ದಾಳಿ ನಡೆಸಿದ್ದಾರೆ. ಸಂವಿಧಾನವು ಜನರಿಗೆ ನೀಡಿರುವ ಎಲ್ಲ ಹಕ್ಕುಗಳನ್ನು ಆ ಪಕ್ಷವು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್‌ ಶನಿವಾರ ಆರೋಪಿಸಿದೆ.

ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸುವ ಇಂತಹ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

'ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಾಹನಗಳ ಮೇಲೆ ಅಸ್ಸಾಂನ ಲಖೀಂಪುರದಲ್ಲಿ ಹೀನಾಯವಾಗಿ ದಾಳಿ ನಡೆಸಿರುವುದು, ಪಕ್ಷದ ಬ್ಯಾನರ್‌ಗಳು, ಪೋಸ್ಟರ್‌ಗಳನ್ನು ಬಿಜೆಪಿಯ ಗೂಂಡಾಗಳು ಹರಿದುಹಾಕಿರುವುದನ್ನು ಬಲವಾಗಿ ಖಂಡಿಸುತ್ತೇವೆ' ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

'ದೇಶದ ಜನರಿಗೆ ಸಂವಿಧಾನದಿಂದ ಖಾತ್ರಿಯಾಗಿರುವ ಪ್ರತಿಯೊಂದು ಹಕ್ಕು ಮತ್ತು ನ್ಯಾಯವನ್ನು ಹತ್ತಿಕ್ಕಲು ಮತ್ತು ನಾಶಮಾಡಲು ಬಿಜೆಪಿಯು ಕಳೆದ 10 ವರ್ಷಗಳಲ್ಲಿ ಪ್ರಯತ್ನಿಸಿದೆ. ಪ್ರಜಾಪ್ರಭುತ್ವವನ್ನು ನಿಯಂತ್ರಿಸುವ ಮೂಲಕ, ಜನರ ಧ್ವನಿಯನ್ನು ಅಡಗಿಸಲು ಬಯಸುತ್ತಿದೆ' ಎಂದು ಆರೋಪಿಸಿದ್ದಾರೆ.

ಯಾತ್ರೆ ಮೇಲಿನ ದಾಳಿಗೆ ಕಾರಣವಾಗಿರುವ ಅಸ್ಸಾಂ ಬಿಜೆಪಿ ಸರ್ಕಾರದ ಇಂತಹ ತಂತ್ರಗಳು ಮತ್ತು ಬೆದರಿಕೆಗಳಿಗೆ ಕಾಂಗ್ರೆಸ್‌ ಬಗ್ಗುವುದಿಲ್ಲ ಎಂದೂ ಖರ್ಗೆ ಒತ್ತಿ ಹೇಳಿದ್ದಾರೆ.

'ಯಾತ್ರೆ ನೋಡಿ ವಿಚಲಿತರಾದ ಸಿಎಂ'
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೂ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಕಿಡಿಗೇಡಿಗಳು ಕಾಂಗ್ರೆಸ್‌ನ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹರಿದುಹಾಕುತ್ತಿರುವ ವಿಡಿಯೊವನ್ನು ತಮ್ಮ ಎಕ್ಸ್‌/ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವೇಣುಗೋಪಾಲ್‌, 'ಅತ್ಯಂತ ಭ್ರಷ್ಟ' ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾರತ್‌ ಜೋಡೊ ನ್ಯಾಯ ಯಾತ್ರೆಯ ಯಶಸ್ಸು ಕಂಡು ಬೆದರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಯಾತ್ರೆಯು ಭಾರಿ ಪರಿಣಾಮ ಉಂಟುಮಾಡುತ್ತಿರುವುದರಿಂದ ವಿಚಲಿತರಾಗಿರುವ ಅವರು ಯಾವುದೇ ಹಂತಕ್ಕೂ ಇಳಿಯಬಲ್ಲರು' ಎಂದಿದ್ದಾರೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯು, ಅಸ್ಸಾಂನಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿನ ಹಲವು ಜಿಲ್ಲೆಗಳ ಮೂಲಕ ಇದೇ ದಿನ (ಶನಿವಾರ) ಅರುಣಾಚಲ ಪ್ರದೇಶ ತಲುಪಲಿದೆ. ಇಂದು ಉತ್ತರ ಲಖೀಂಪುರ ಪಟ್ಟಣದ ಮೂಲಕ ಯಾತ್ರೆ ಸಾಗುವ ಮಾರ್ಗದಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹರಿದುಹಾಕಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.