ನವದೆಹಲಿ/ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಕುರಿತು ಬಿಜೆಪಿ ಶುಕ್ರವಾರ ವಾಗ್ದಾಳಿ ನಡೆಸಿತ್ತು. ಈ ಸಂಬಂಧ ಕಾಂಗ್ರೆಸ್ ಶನಿವಾರ ಬಿಜೆಪಿಗೆ ತಿರುಗೇಟು ನೀಡಿದೆ.
‘ಮುಫ್ತಿ ಮೊಹಮ್ಮದ್ ಸಯೀದ್ ಅವರ ನೇತೃತ್ವದ ಪಿಡಿಪಿಯೊಂದಿಗೆ 2015ರಲ್ಲಿ ಮೈತ್ರಿ ಮಾಡಿಕೊಂಡಾಗ, ಆ ಪಕ್ಷದ ಪ್ರಣಾಳಿಕೆಯನ್ನು ಓದಿದ್ದಿರೇ?’ ಎಂದು ಕಾಂಗ್ರೆಸ್ ಕೇಳಿದೆ. ‘ಎನ್‌ಸಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೊದಲು ಅದರ ಪ್ರಣಾಳಿಕೆಯನ್ನು ಓದಿದ್ದೀರೇ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 10 ಪ್ರಶ್ನೆಗಳನ್ನು ಕೇಳಿದ್ದರು.
‘ಕಾಶ್ಮೀರದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳ ಕರೆನ್ಸಿಗಳ ಬಳಕೆಗೆ ಅವಕಾಶ ನೀಡಲಾಗುವುದು ಎಂದು ಪಿಡಿಪಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಆದ್ದರಿಂದ, ಅಮಿತ್ ಶಾ ಅವರಿಂದ ನನಗೆ ಒಂದು ವಿಷಯ ತಿಳಿಯಬೇಕಿದೆ. ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೊದಲು ಅದರ ಪ್ರಣಾಳಿಕೆ ಓದಿದ್ದರೇ’ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವರ್ ಖೇರಾ ಸಚಿವ ಶಾ ಅವರನ್ನು ಪ್ರಶ್ನಿಸಿದರು.
‘ಸ್ವಯಂ ಆಡಳಿತದ ಘೋಷಣೆಯನ್ನೂ ಪಿಡಿಪಿ ಮಾಡಿತ್ತು. ಈ ಎಲ್ಲದರ ಬಳಿಕವೂ ನೀವು (ಬಿಜೆಪಿ) ಅವರೊಂದಿಗೆ ಸೇರಿ ಸರ್ಕಾರ ಮಾಡಿದ್ದೀರಿ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಹಾಕಿಕೊಂದ್ದೀರಿ. ವಾಜಪೇಯಿ ಅವರ ಮಾರ್ಗದಲ್ಲಿ ಸಾಗುವುದಾಗಿ ಹೇಳಿದ್ದೀರಿ. ಹುರಿಯತ್‌ನೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದೀರಿ. ಯಾಕಾಗಿ ಇಂಥ ಕಾರ್ಯಕ್ರಮಗಳನ್ನು ಹಾಕಿಕೊಂಡಿರಿ? ಬಿಜೆಪಿಯವರಿಗೆ ಅರ್ಥವಿಲ್ಲದ್ದನ್ನು ಮಾತನಾಡುವ ಚಾಳಿ ಅಂಟಿದೆ’ ಎಂದು ಖೇರಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.