ADVERTISEMENT

ಉಪಚುನಾವಣೆ: ಹಿಮಾಚಲ ಪ್ರದೇಶ ಸಿ.ಎಂ ಪತ್ನಿ ಕಣಕ್ಕೆ

ದೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸುಖು ಪತ್ನಿ ಕಮಲೇಶ್‌ ಸ್ಪರ್ಧೆಗೆ ಕಾಂಗ್ರೆಸ್‌ ಒಲವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:51 IST
Last Updated 18 ಜೂನ್ 2024, 14:51 IST
-
-   

ನವದೆಹಲಿ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರ ಪತ್ನಿ ಕಮಲೇಶ್‌ ಠಾಕೂರ್‌ ಅವರನ್ನು ಉಪಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ, ಒಂದು ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ಮಂಗಳವಾರ ನಿರ್ಧರಿಸಿದೆ.

ಕಮಲೇಶ್‌ ಅವರು ದೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮೂವರು ಪಕ್ಷೇತರ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಕ್ಷೇತರ ಶಾಸಕ ಹೋಶಿಯಾರ್ ಸಿಂಗ್‌ ಅವರು ದೆಹ್ರಾ ಕ್ಷೇತ್ರದಿಂದ ಈಗ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ದೆಹ್ರಾ ಕ್ಷೇತ್ರದಿಂದ ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಮುಖ್ಯಮಂತ್ತಿ ಸುಖು ಅವರಿಗೆ ಆಸಕ್ತಿ ಇರಲಿಲ್ಲ ಎಂದು ಮೂಲಗಳು ಹೇಳಿವೆ.

‘ಕಮಲೇಶ್‌ ಠಾಕೂರ್‌ ಅವರು ದೆಹ್ರಾ ಕ್ಷೇತ್ರದಲ್ಲಿ ಗೆಲ್ಲುವರು ಎಂಬುದಾಗಿ ಸಮೀಕ್ಷೆಯೊಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ’ ಎಂದು ಇವೇ ಮೂಲಗಳು ಹೇಳಿವೆ.

2010ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆಯಾದ ನಂತರ, ಕಾಂಗ್ರೆಸ್‌ ಈ ಕ್ಷೇತ್ರದಿಂದ ಈ ವರೆಗೆ ಗೆದ್ದಿಲ್ಲ.

ಇನ್ನೊಂದೆಡೆ, ಪಕ್ಷದ ರಾಜ್ಯ ಮುಖಂಡ ರಾಜೇಶ್‌ ಶರ್ಮಾ ಅವರು ಸಹ ದೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು.

ಉಪಚುನಾವಣೆ ನಡೆಯಲಿರುವ ಹಮೀರಪುರ ಕ್ಷೇತ್ರದಿಂದ ಪುಷ್ಪೇಂದ್ರ ವರ್ಮಾ ಹಾಗೂ ನಾಲಗಢದಿಂದ ಹರ್ದೀಪ್‌ ಸಿಂಗ್‌ ಬಾವಾ ಅವರನ್ನು ಕಣಕ್ಕಿಳಿಸುವ ಕುರಿತು ಸೋಮವಾರ ಘೋಷಣೆ ಮಾಡಿದ್ದ ಕಾಂಗ್ರೆಸ್‌, ದೆಹ್ರಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ, ಈ ಕ್ಷೇತ್ರದಿಂದ ಮುಖ್ಯಮಂತ್ರಿ ಸುಖು ಪತ್ನಿ ಕಮಲೇಶ್‌ ಅವರನ್ನೇ ಕಣಕ್ಕಿಳಿಸಲಾಗುತ್ತದೆ ಎಂಬ ವದಂತಿಗೆ ಇದು ದಾರಿ ಮಾಡಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.