ADVERTISEMENT

ಕಾಂಗ್ರೆಸ್‌ ನಾಲ್ಕನೇ ಪಟ್ಟಿ ಬಿಡುಗಡೆ: ತಿರುವನಂತಪುರದಿಂದ ಶಶಿ ತರೂರ್

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:54 IST
Last Updated 9 ಮೇ 2019, 17:54 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಮುಖಂಡ ಕೆ.ವಿ. ಥಾಮಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ. ಶನಿವಾರ ರಾತ್ರಿ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿಯಲ್ಲಿ ಎರ್ನಾಕುಲಂ ಲೋಕಸಭಾ ಕ್ಷೇತ್ರಕ್ಕೆ ಯುವ ಮುಖವನ್ನು ‍ಪಕ್ಷ ಪರಿಚಯಿಸಿದೆ. ಥಾಮಸ್ ಅವರ ಬದಲಾಗಿ ಹಿಬಿ ಅಡೆನ್ ಅವರು ಸ್ಪರ್ಧಿಸುತ್ತಿದ್ದಾರೆ.

ಅರುಣಾಚಲ ಪ್ರದೇಶದ ಇಬ್ಬರು, ಛತ್ತೀಸಗಡದ ಐವರು, ಕೇರಳದ 12, ಉತ್ತರ ಪ್ರದೇಶದ 7 ಹಾಗೂ ಅಂಡಮಾನ್–ನಿಕೋಬಾರ್‌ನ ಒಬ್ಬ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗಿದೆ.

ಉಪಚುನಾವಣೆಯಲ್ಲಿ ಕೈರಾನಾ ಕ್ಷೇತ್ರದಿಂದ ಒಮ್ಮತದ ಅಭ್ಯರ್ಥಿಯಾಗಿ ತಬಸ್ಸಮ್ ಹಸನ್ ಅವರು ಕಣಕ್ಕಿಳಿದಿದ್ದರು. ಈ ಬಾರಿ ಸಮಾಜವಾದಿ ಪಕ್ಷವು ಹಸನ್‌ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಕೂಡಾ ಅಭ್ಯರ್ಥಿಯನ್ನು ಘೋಷಿಸಿದೆ. ಹರೇಂದರ್ ಮಲಿಕ್ ಅವರು ‘ಕೈ’ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ADVERTISEMENT

ರಿಜಿಜು ವರ್ಸಸ್ ತುಕಿ:ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಮ್ ತುಕಿ ಅವರು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಅರುಣಾಚಲ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧೆ ಒಡ್ಡಲಿದ್ದಾರೆ. ಹಾಲಿ ಸಂಸದ ನಿನೊಂಗ್ ಎರಿಂಗ್ ಅವರ ಬದಲಾಗಿ ಅರುಣಾಚಲ ಪೂರ್ವ ಕ್ಷೇತ್ರದಲ್ಲಿ ಜೇಮ್ಸ್ ಲೊವಾಂಗ್‌ಚಾ ವಾಂಗ್ಲೆಟ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.

ತಿರುವನಂತಪುರದಿಂದ ಶಶಿ ತರೂರ್, ಮಾವೇಲಿಕರದಿಂದ ಕೆ. ಸುರೇಶ್ ಹಾಗೂ ಪಟ್ಟನಂತಿಟ್ಟ ಕ್ಷೇತ್ರದಿಂದ ಆಂಟೊ ಆಂಟೊನಿ ಅವರು ಪುನರಾಯ್ಕೆ ಬಯಸಿದ್ದಾರೆ. ಚಾಲಕ್ಕುಡಿಯಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಂಸದ ಪಿ.ಸಿ ಚಾಕೋ ಅವರಿಗೆ ನಿರಾಸೆಯಾಗಿದೆ. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಕಟವರ್ತಿ ಬೆನ್ನಿ ಬಹನನ್ ಅವರನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ.

ಕಾಸರಗೋಡಿನಿಂದ ರಾಜಮೋಹನ್ ಉನ್ನಿತಾನ್, ಕಣ್ಣೂರಿನಿಂದ ಕೆ. ಸುಧಾಕರನ್, ಕೋಯಿಕ್ಕೋಡ್‌ನಿಂದ ಎಂ.ಕೆ.ರಾಘವನ್, ಪಾಲಕ್ಕಾಡ್‌ನಿಂದ ವಿ.ಕೆ. ಶ್ರೀಕಾಂತನ್, ಅಳತ್ತೂರಿನಿಂದ ರಮ್ಯಾ ಹರಿದಾಸ್, ತ್ರಿಶೂರ್‌ನಿಂದ ಟಿ.ಎನ್. ಪ್ರತಾಪನ್ ಹಾಗೂ ಇಡುಕ್ಕಿಯಿಂದ ಡೀನ್ ಕುರಿಯಕೊಸ್ ಅವರು ಸ್ಪರ್ಧೆ ಮಾಡಲಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಇಂದಿರಾ ಭಟ್ಟಿ, ಮೀರಠ್‌ನಿಂದ ಓಂಪ್ರಕಾಶ್ ಶರ್ಮಾ, ಗೌತಮ್‌ಬುದ್ಧ ನಗರ ಕ್ಷೇತ್ರದಿಂದ ಅರವಿಂದ ಸಿಂಗ್ ಚೌಹಾಣ್, ಅಲಿಗಡದಿಂದ ಬ್ರಿಜೇಂದ್ರ ಸಿಂಗ್, ಹಮೀರ್‌ಪುರದಿಂದ ಪ್ರೀತಮ್ ಲೋದಿ ಹಾಗೂ ಘೋಸಿಯಿಂದ ಬಾಲಕೃಷ್ಣ ಚೌಹಾಣ್ ಕಣಕ್ಕೆ ಇಳಿಯಲಿದ್ದಾರೆ.

ಅಂಡಮಾನ್ ನಿಕೋಬಾರ್‌ನಲ್ಲಿ ಕುಲದೀಪ್‌ ರೈ ಶರ್ಮಾ ಅವರನ್ನು ಕಾಂಗ್ರೆಸ್ ಸ್ಪರ್ಧೆಗೆ ಇಳಿಸುತ್ತಿದೆ. ಛತ್ತೀಸ್‌ಗಡದಲ್ಲಿ ಖೇಲ್‌ ಸಾಯಿಸಿಂಗ್ ಅವರಿಗೆ ಸರ್ಗುಜಾ, ಲಾಲ್‌ಜಿತ್ ಸಿಂಗ್ ರಾಟಿಯಾ ಅವರಿಗೆ ರಾಯಗಡ, ರವಿ ಭಾರದ್ವಾಜ್ ಅವರಿಗೆ ಜಂಗಿರ್, ದೀಪಕ್ ಬೈಜ್ ಅವರಿಗೆ ಬಸ್ತಾರ್‌ ಹಾಗೂ ಬೀರೇಶ್ ಠಾಕೂರ್ ಅವರಿಗೆ ಕಂಕೆರ್ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.