ನವದೆಹಲಿ: ಲೋಸಕಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸಚೇತಕ ಮಾಣಿಕಂ ಟಾಗೋರ್ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕು ಚ್ಯುತಿ ನೋಟಿಸ್ ನೀಡಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ಚರ್ಚೆಯ ಮೇಲೆ ಭಾಷಣ ಮಾಡುವಾಗ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ
ಮಹಾರಾಷ್ಟ್ರದ ರೈತನ ವಿಧವೆ ಕಲಾವತಿ ಬಂಡೂರ್ಕರ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2008ರಲ್ಲಿ ಭೇಟಿಯಾಗಿ ಅವರಿಗೆ ಮನೆ ನಿರ್ಮಾಣ ಹಾಗೂ ಇನ್ನಿತರ ಅಗತ್ಯಗಳಿಗೆ ಸ್ಪಂದಿಸಿದ್ದರು.
ಇದನ್ನು ಭಾಷಣದಲ್ಲಿ ಉಲ್ಲೇಖಿಸಿದ್ದ ಅಮಿತ್ ಶಾ, ‘ಕಲಾವತಿ ಅವರಿಗೆ ಸರ್ಕಾರದ ವಿವಿಧ ಯೋಜನೆಗಳಿಂದ ಮನೆ ನಿರ್ಮಾಣ ಮಾಡುವಂತೆ ನೋಡಿಕೊಂಡಿದ್ದು ಮೋದಿ ಸರ್ಕಾರ. ಆದರೆ ಅವರಿಗೆ ಸಹಾಯ ಮಾಡಿದ್ದು ನಾವು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ’ ಎಂದು ಹೇಳಿದ್ದರು.
ಸದನವನ್ನು ಉದ್ದೇಶಿಸಿ ಮಾತನಾಡುವಾಗ ನಿಖರ ಮತ್ತು ಸತ್ಯವಾದ ಮಾಹಿತಿಯ ಪಾವಿತ್ರ್ಯವನ್ನು ಎತ್ತಿಹಿಡಿಯದೆ ಅಮಿತ್ ಶಾ ಅವರು ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಮಾಣಿಕಂ ಟಾರೋರ್ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
’ನಿನ್ನೆ ಅಂದರೆ 09.08.2023ರಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಮಹಾರಾಷ್ಟ್ರದ ರೈತನ ವಿಧವೆ ಕಲಾವತಿ ಅವರಿಗೆ ನೀಡಿದ ಅನುಕೂಲಗಳ ಬಗ್ಗೆ ಹೇಳಿದ್ದರು. ಆದರೆ ಇದನ್ನು ಸಂಬಂಧಪಟ್ಟವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ವೇಳೆ ನಿರಾಕರಿಸಿದ್ದಾರೆ. ಮೋದಿ ಸರ್ಕಾರ ತಮಗೆ ಏನೂ ನೀಡಿಲ್ಲವೆಂದೂ, ಮನೆ ನಿರ್ಮಾಣ ಮಾಡಲು ರಾಹುಲ್ ಗಾಂಧಿ ಸಹಾಯ ಮಾಡಿದ್ದಾಗಿ ಹೇಳಿದ್ದಾರೆ’ ಎಂದು ನೋಟಿಸ್‌ನಲ್ಲಿ ಮಾಣಿಕಂ ಹೇಳಿದ್ದಾರೆ.
‘ಅಮಿತ್ ಶಾ ಹಾಗೂ ಕಲಾವತಿ ಅವರ ಹೇಳಿಕೆಯಲ್ಲಿ ವ್ಯತ್ಯಾಸವಿದ್ದು ಮಾಹಿತಿಯ ನಿಖರತೆ ಬಗ್ಗೆ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ. ಇದು ಲೋಕಸಭೆ ನಿಯಮಾವಳಿಗಳ ಅಧ್ಯಾಯ 20ರ ನಿಯಮ 22 ಅಡಿ ಹಕ್ಕುಚ್ಯುತಿಯಾಗಲಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
‘ಹೀಗಾಗಿ ನಿಮ್ಮ ಅಧಿಕಾರವನ್ನು ಬಳಸಿ ಕೇಂದ್ರ ಗೃಹ ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು’ ಎಂದು ಕೋರಿದ್ದಾರೆ.
ಮಹಾರಾಷ್ಟ್ರದ ವಿದರ್ಭದಲ್ಲಿ ಉಂಟಾದ ಕೃಷಿ ಬಿಕ್ಕಟ್ಟಿನಲ್ಲಿ ಕಲಾವತಿ ಅವರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2008ರಲ್ಲಿ ರಾಹುಲ್ ಗಾಂಧಿ ಕಲಾವತಿ ಅವರನ್ನು ಭೇಟಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.