ಭೋಪಾಲ್: ‘ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ‘ನಾಪತ್ತೆ’ಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ ₹10,000 ಬಹುಮಾನ ನೀಡಲಾಗುವುದು’ ಎಂದು ರಾಜ್ಯದ ಕಾಂಗ್ರೆಸ್ ಮುಖಂಡರೊಬ್ಬರು ಪ್ರಕಟಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ವಕ್ತಾರ ರವಿ ಸಕ್ಸೇನಾ, ಭೋಪಾಲ್ ಕ್ಷೇತ್ರದಲ್ಲಿ ಅತ್ಯಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ. ‘ಕೋವಿಡ್ ರೋಗಿಗಳು ಔಷಧ ಹಾಗೂ ಜೀವರಕ್ಷಕರ ಪರಿಕರಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದಿದ್ದಾರೆ.
‘ರೋಗಿಗಳು ಸೌಲಭ್ಯ, ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ಜನರಿಗೆ ಅವರ ಸೇವೆ ಅಗತ್ಯವಾಗಿರುವಾಗ ಸಂಸದೆ ನಾಪತ್ತೆಯಾಗಿದ್ದಾರೆ. ಇದು ಅವರ ಅಸೂಕ್ಷ್ಮವಾಗಿರುವ ನಡೆ. ಇವರನ್ನು ಪತ್ತೆ ಮಾಡಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದಿದ್ದಾರೆ.
ಭೋಪಾಲ್‌ನಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವ ಪ್ರಜ್ಞಾಸಿಂಗ್ ಅವರು, ಕಳೆದ ವರ್ಷ ಕೋವಿಡ್ ಅಲೆ ಇದ್ದಾಗಲೂ ಕಾಣಿಸಿರಲಿಲ್ಲ ಎಂದು ಸಕ್ಸೇನಾ ತಿಳಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರವಾಲ್, ಠಾಕೂರ್ ಅವರನ್ನು ಅನಾರೋಗ್ಯದಿಂದಾಗಿ ವಿಮಾನದಲ್ಲಿ ಮುಂಬೈಗೆ ಕರೆದೊಯ್ದಿರುವುದು ಗೊತ್ತಿರುವ ಸಂಗತಿ. ಕಾಂಗ್ರೆಸ್ ಮುಖಂಡರ ಹೇಳಿಕೆ ಆ ಪಕ್ಷ ಸೂಕ್ಷ್ಮತೆ ಕಳೆದುಕೊಂಡಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.