ಛಿಂದ್ವಾರಾ(ಮಧ್ಯಪ್ರದೇಶ): ಬಿಜೆಪಿಗೆ ಸೇರುತ್ತೇನೆ ಎಂಬ ವದಂತಿಗಳನ್ನು ಸೃಷ್ಟಿಸಿದ್ದು ನೀವೇ (ಮಾಧ್ಯಮಗಳು) ಹೊರತು ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಮಲನಾಥ್ ಹೇಳಿದರು.
ತಾವು ಪ್ರತಿನಿಧಿಸುವ ಛಿಂದ್ವಾರಾ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಕಮಲನಾಥ್ ಅವರು ಬಿಜೆಪಿ ಸೇರ್ಪಡೆ ವದಂತಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಇಂತಹ ಊಹಾಪೋಹ ಹರಡುತ್ತಿರುವುದು ನೀವು(ಮಾಧ್ಯಮ). ಬೇರೆ ಯಾರೂ ಇದರ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನೀವು ನನ್ನ ಬಳಿ ಎಂದಾದರೂ ಕೇಳಿದ್ದೀರಾ? ನೀವೇ ಸುದ್ದಿ ಮಾಡಿ ನಂತರ ನನ್ನ ಬಳಿ ಬಂದು ಕೇಳುತ್ತೀರಾ’ ಎಂದರು.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಆದ ಹಾನಿಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಾಲ ಪಡೆದು ಆಡಳಿತ ನಡೆಸುತ್ತಿದೆ. ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ’ ಎಂದು ಹೇಳಿದರು.
ಕಮಲನಾಥ್ ಹಾಗೂ ಅವರ ಪುತ್ರ ನಕುಲನಾಥ್ ಅವರು ಕಳೆದ ವಾರ ದೆಹಲಿಗೆ ಪ್ರಯಾಣಿಸಿದ ಬೆನ್ನಲ್ಲೇ ಕಾಂಗ್ರೆಸ್ ತೊರೆಯುವ ವದಂತಿಗಳು ಹರಡಿದ್ದವು. ಅಲ್ಲದೇ ಛಿಂದ್ವಾರಾ ಜಿಲ್ಲೆಯಲ್ಲಿ ಕಮಲನಾಥ್ ಅವರ ಕೆಲ ಅನುಯಾಯಿಗಳು ಬಿಜೆಪಿ ಸೇರಿದ್ದರು.
‘ಬಿಜೆಪಿಗೆ ಕಮಲನಾಥ್ ಅವರ ಅಗತ್ಯವಿಲ್ಲ. ಪಕ್ಷದ ಬಾಗಿಲು ಅವರಿಗೆ ಮುಚ್ಚಿದೆ’ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ ಕೈಲಾಸ್ ವಿಜಯವರ್ಗೀಯ ಹೇಳಿದ್ದರು.
ಕಮಲನಾಥ್ ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಬಲವಾಗಿ ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.