ನವದೆಹಲಿ: ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ‘ಅಗ್ನಿಪಥ’ ಯೋಜನೆಯನ್ನು ಉದ್ಯೋಗಾಕಾಂಕ್ಷಿಗಳು ವಿರೋಧಿಸುತ್ತಿದ್ದು, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿವೆ.
ವಿರೋಧ ಪಕ್ಷ ಕಾಂಗ್ರೆಸ್ ಕೂಡ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿದೆ.
ಈ ಮಧ್ಯೆ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವಮನೀಶ್ ತಿವಾರಿ ಅವರು, ‘ಅಗ್ನಿಪಥ’ವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
‘ಅಗ್ನಿಪಥ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಆತಂಕಗೊಂಡಿರುವ ಯುವ ಸಮುದಾಯದ ವಿಚಾರದಲ್ಲಿ ನಾನು ಸಹಾನುಭೂತಿ ಹೊಂದಿದ್ದೇನೆ. ವಾಸ್ತವವೇನೆಂದರೆ ತಂತ್ರಜ್ಞಾನ, ಆಯುಧಗಳ ಅರಿವಿರುವ ಯುವ ಸಶಸ್ತ್ರ ಪಡೆಯ ಅಗತ್ಯ ಭಾರತಕ್ಕೆ ಇದೆ. ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಾಗಬಾರದು’ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಅಗ್ನಿಪಥ’ವನ್ನು ವಿರೋಧಿಸಿದ್ದರು. ‘ಮೋದಿ ಅವರು ನಿರುದ್ಯೋಗಿ ಯುವಜನರ ಮಾತು ಕೇಳಬೇಕು. ಅಗ್ನಿಪಥದಲ್ಲಿ ನಡೆಸಿ ಅವರ ತಾಳ್ಮೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಬಾರದು’ ಎಂದು ಹೇಳಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯು ಕೂಡ ‘ಅಗ್ನಿಪಥ’ ಯೋಜನೆಯ ವಿರುದ್ಧ ಮಾತನಾಡಿದೆ.
‘ಅಗ್ನಿಪಥ ಯೋಜನೆಯು ಅತೃಪ್ತಿ, ಹತಾಶೆ ಮತ್ತು ಕರಾಳ ಭವಿಷ್ಯದ (ನಿರುದ್ಯೋಗ) ಭೀತಿ ಹುಟ್ಟಿಸಿದೆ. ಇದು ಬಿಹಾರ ಸೇರಿದಂತೆ ದೇಶದ ಎಲ್ಲೆಡೆಯ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಗ್ನಿಪಥ ಯೋಜನೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ಮರುಪರಿಶೀಲನೆಗೆ ಒಳಪಡಿಸಬೇಕು. ಇದು ದೇಶದ ಸುರಕ್ಷತೆಯ ವಿಷಯ’ ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.