ADVERTISEMENT

‘ರಾವಣ’ ಪೋಸ್ಟರ್‌: ಕೋರ್ಟ್‌ ಮೊರೆ ಹೋದ ಕಾಂಗ್ರೆಸ್‌

ಪಿಟಿಐ
Published 7 ಅಕ್ಟೋಬರ್ 2023, 11:30 IST
Last Updated 7 ಅಕ್ಟೋಬರ್ 2023, 11:30 IST
<div class="paragraphs"><p>ರಾವಣ ಪೋಸ್ಟರ್‌</p></div>

ರಾವಣ ಪೋಸ್ಟರ್‌

   

ಚಿತ್ರ: X/@BJP4India

ಜೈಪುರ: ರಾಹುಲ್‌ ಗಾಂಧಿ ಅವರನ್ನು ‘ನವಯುಗ ರಾವಣ’ನಂತೆ ಚಿತ್ರಿಸಿದ ಪೋಸ್ಟರ್‌ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಅಮಿತ್ ಮಾಳವೀಯಾ ಅವರ ವಿರುದ್ಧ ರಾಜಸ್ಥಾನ ಕಾಂಗ್ರೆಸ್‌ ನಾಯಕ ಜಸ್ವಂತ್ ಗುರ್ಜರ್‌ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ADVERTISEMENT

ಐಪಿಸಿ ಸೆಕ್ಷನ್ 499 (ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸುಳ್ಳು ಆರೋಪ), 500 (ಮಾನನಷ್ಟ), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಬಿಜೆಪಿಯ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಗುರ್ಜರ್ ಅವರು ಜೈಪುರದ ಮೆಟ್ರೊಪಾಲಿಟನ್‌ ಕೋರ್ಟ್‌–11ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇದೇ 9ರಂದು ಆಲಿಸಲು ನ್ಯಾಯಾಲಯ ನಿರ್ಧರಿಸಿದೆ.

ರಾಹುಲ್‌ ಗಾಂಧಿ ಅವರಿಗೆ ಹತ್ತು ತಲೆಗಳಿರುವಂತೆ ಚಿತ್ರಿಸಿ, ಅದಕ್ಕೆ ‘ರಾವಣ’ ಎಂದು ಶೀರ್ಷಿಕೆ ನೀಡಿದ ಪೋಸ್ಟರ್‌ ಅನ್ನು ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ‘ಹೊಸ ಯುಗದ ರಾವಣ ಇಲ್ಲಿದ್ದಾನೆ. ಈತ ದುಷ್ಟ, ಧರ್ಮ ವಿರೋಧಿ. ರಾಮನ ವಿರೋಧಿ. ಈತನ ಗುರಿ ಭಾರತವನ್ನು ನಾಶ ಮಾಡುವುದಾಗಿದೆ’ ಎಂದು ಬರೆದುಕೊಂಡಿತ್ತು.

ಓದಿ: ರಾಹುಲ್ ರಾವಣ, ಮೋದಿ ಸುಳ್ಳುಗಾರ: ಕಾಂಗ್ರೆಸ್ VS ಬಿಜೆಪಿ ವಾಗ್ಯುದ್ಧ

ಇದನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್‌, ‘ಕೇಸರಿ ಪಕ್ಷದ ಉಗ್ರ ಟೀಕಾಕಾರ ರಾಹುಲ್‌ ಅವರನ್ನು ಕೊಲ್ಲುವ ನೀಚ ಉದ್ದೇಶವನ್ನು ಬಿಜೆಪಿ ಹೊಂದಿದೆ’ ಎಂದು ಆರೋಪಿಸಿತ್ತು.

ಅರ್ಜಿಯಲ್ಲಿ ಏನಿದೆ?

ಅಕ್ಟೋಬರ್ 5ರಂದು ರಾಹುಲ್ ಗಾಂಧಿ ವಿರುದ್ದ ಪೋಸ್ಟರ್‌ವೊಂದನ್ನು ಆರೋಪಿಗಳು ಬಿಡುಗಡೆ ಮಾಡಿದ್ದು, ಇದರ ಹಿಂದೆ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಅವಮಾನ ಮಾಡುವ ಮತ್ತು ಅವರಿಗೆ ಹಾನಿ ಮಾಡುವ ಉದ್ದೇಶವಿದೆ. ಆ ಮೂಲಕ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ರಾಮ ವಿರೋಧಿ ಮತ್ತು ಧರ್ಮ ವಿರೋಧಿ ಎಂದು ಬಿಂಬಿಸಿ ಅವರ ವಿರುದ್ಧ ಜನರನ್ನು ಪ್ರಚೋದಿಸುವ ದುರುದ್ದೇಶವೂ ಇದೆ. ಪ‍್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಗುರ್ಜರ್‌ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.