ವಯನಾಡ್: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ಕೇರಳದ ವಯನಾಡ್‌ನಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿದರು.
ವಯನಾಡ್‌ನ ತ್ರಿಕ್ಕೈಪಟ್ಟದಿಂದ ಮುತ್ತಿಲ್ ವರೆಗೆ 6 ಕಿ.ಮೀ. ಟ್ರ್ಯಾಕ್ಟರ್ ರ್‍ಯಾಲಿ ನಡೆಸಿದ ಬಳಿಕ ಮಾತನಾಡಿದ ಅವರು, ‘ಕೃಷಿ ಮಾತ್ರವೇ ‘ಭಾರತ ಮಾತೆ’ಗೆ ಸಂಬಂಧಿಸಿದ ಏಕೈಕ ಉದ್ಯಮ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನರು ಒತ್ತಡ ಹೇರಬೇಕು’ ಎಂದು ಕರೆ ನೀಡಿದ್ದಾರೆ.
‘ಭಾರತೀಯ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಇಡೀ ಜಗತ್ತು ನೋಡುತ್ತಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ರೈತರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ದೂರಿದ್ದಾರೆ.
ಭಾರತೀಯ ರೈತರ ಸ್ಥಿತಿಯ ಬಗ್ಗೆ ಪಾಪ್ ತಾರೆಯರು ಪ್ರತಿಕ್ರಿಯಿಸುತ್ತಾರೆ. ಆದರೆ ಭಾರತ ಸರ್ಕಾರಕ್ಕೆ ಆಸಕ್ತಿ ಇಲ್ಲ. ಒತ್ತಡ ಹೇರದ ಹೊರತು ಅವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾರರು ಎಂದು ಅವರು ಹೇಳಿದ್ದಾರೆ.
ಭಾರತದ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಲು ಹಾಗೂ ಇಡೀ ಕೃಷಿ ಉದ್ಯಮವನ್ನು ಪ್ರಧಾನಿ ನರೇಂದ್ರ ಮೋದಿಯವರ ಇಬ್ಬರಿಂದ ಮೂವರು ಸ್ನೇಹಿತರಿಗೆ ನೀಡಲು ಹೊಸ ಮೂರು ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕೃಷಿಯು ದೇಶದಲ್ಲೇ ಅತಿ ದೊಡ್ಡ ಉದ್ಯಮವಾಗಿದೆ. ₹40 ಲಕ್ಷ ಕೋಟಿ ಮೌಲ್ಯದ ಈ ಉದ್ಯಮಕ್ಕೆ ಲಕ್ಷಾಂತರ ಭಾರತೀಯರು ಮಾಲೀಕರಾಗಿದ್ದಾರೆ. ಇದನ್ನು ಕೆಲವು ಮಂದಿ ತಮ್ಮ ವಶ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.