ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಆರೋಪಿಸಿದ್ದಾರೆ.
ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್, ಅದಾನಿ ಷೇರು ಹಗರಣಕ್ಕೆ ಸಂಬಂಧಿಸಿದಂತೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿರುದ್ಧ ಮಾಡಿರುವ ಆರೋಪಗಳ ತನಿಖೆಗೆ ರಾಹುಲ್ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಕಂಗನಾ ಟೀಕಾ ಪ್ರಹಾರ ನಡೆಸಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿರುವ ಕಂಗನಾ, ರಾಹುಲ್ ಗಾಂಧಿಯನ್ನು 'ಅಪಾಯಕಾರಿ ವ್ಯಕ್ತಿ' ಎಂದು ಕರೆದಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ರಾಹುಲ್ ಗಾಂಧಿ ವಿಷಕಾರಿ ಮತ್ತು ವಿದ್ವಂಸಕಾರಿ ವ್ಯಕ್ತಿ. ತಾವೇನಾದರೂ ಪ್ರಧಾನಿಯಾಗಲು ಸಾಧ್ಯವಾದಿದ್ದರೆ, ಈ ದೇಶವನ್ನೇ ನಾಶಮಾಡಬೇಕು ಎಂಬುದು ಅವರ ಅಜೆಂಡಾ' ಎಂದು ದೂರಿದ್ದಾರೆ.
'ಹಿಂಡೆನ್‌ಬರ್ಗ್ ವರದಿಯು ನಮ್ಮ ಷೇರು ಮಾರುಕಟ್ಟೆಯನ್ನು ಗುರಿಯಾಗಿಸಿದೆ' ಎಂದು ಕಿಡಿಕಾರಿರುವ ಸಂಸದೆ, 'ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ರಾಹುಲ್ ಗಾಂಧಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಗುಡುಗಿದ್ದಾರೆ.
'ಮಿ. ರಾಹುಲ್ ಗಾಂಧಿ, ಜೀವನಪರ್ಯಂತ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಲು ಹಾಗೂ ಈಗ ಅನುಭವಿಸುತ್ತಿರುವಂತೆಯೇ, ಈ ರಾಷ್ಟ್ರದ ಜನರ ವೈಭವ, ಪ್ರಗತಿ ಮತ್ತು ರಾಷ್ಟ್ರೀಯತೆಯನ್ನು ಅನುಭವಿಸಲು ಸಜ್ಜಾಗಿ. ದೇಶದ ಜನರು ನಿಮ್ಮನ್ನು ಎಂದಿಗೂ ತಮ್ಮ ನಾಯಕ ಎಂದು ಒಪ್ಪುವುದಿಲ್ಲ. ಗೌರವಕ್ಕೆ ಅರ್ಹವಲ್ಲದ ವ್ಯಕ್ತಿ ನೀವು' ಎಂದು ಛೇಡಿಸಿದ್ದಾರೆ.
ಅದಾನಿ ಷೇರು ಹಗರಣದ ಬಗ್ಗೆ 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ್ದ ಹಿಂಡೆನ್‌ಬರ್ಗ್, ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂಬ ಗಂಭೀರ ಆರೋಪ ಮಾಡಿತ್ತು. ಇದೀಗ, ಈ ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾತ್ರವಿದೆ ಎಂದು ದೂರಿದೆ.
ಉದ್ಯಮಿ ಗೌತಮ್ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಬುಚ್ ದಂಪತಿಯ ಪಾಲುದಾರಿಕೆ ಇದೆ. ಅದಾನಿಯವರು ಮಾರಿಷಸ್ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಶನಿವಾರ (ಆಗಸ್ಟ್ 10ರಂದು) ಹೇಳಿದೆ.
ಹಿಂಡೆನ್‌ಬರ್ಗ್ ಆರೋಪದಿಂದ ಸೆಬಿಯ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜಿಪಿಸಿ) ರಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ತಮ್ಮ ವಿರುದ್ಧದ ಆರೋಪಗಳನ್ನು ಅದಾನಿ ಸಮೂಹ ಮತ್ತು ಬುಚ್ ದಂಪತಿ ಅಲ್ಲಗಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.