ADVERTISEMENT

‘ಮೋದಿ ಅನಕ್ಷರಸ್ಥ, ಅವರ ಜೀವನಚಿತ್ರ ನೋಡುವುದರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ’

ಶಾಲೆಗಳಲ್ಲಿ ಮೋದಿ ಕಿರುಚಿತ್ರ ಪ್ರದರ್ಶಿಸುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2018, 6:27 IST
Last Updated 13 ಸೆಪ್ಟೆಂಬರ್ 2018, 6:27 IST
ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌            –ಪಿಟಿಐ ಚಿತ್ರ
ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ –ಪಿಟಿಐ ಚಿತ್ರ   

ಮುಂಬೈ: ರಾಜ್ಯದ ಶಾಲೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧರಿಸಿದ ಕಿರುಚಿತ್ರ ಪ್ರದರ್ಶಿಸಲು ನಿರ್ಧರಿಸಿರುವಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕಸಂಜಯ್‌ ನಿರುಪಮ್‌,ಮೋದಿಯವರನ್ನು ‘ಅನಕ್ಷರಸ್ಥ’ ಎಂದು ಜರಿದಿದ್ದಾರೆ.

ಸಂದರ್ಶನವೊಂದರವೇಳೆ ಈ ರೀತಿಯ ಹೇಳಿಕೆ ನೀಡಿ ವಿವಾದ ಸೃಷ್ಟಿರುವ ಅವರು, ‘ಚಿತ್ರವನ್ನು ಬಲವಂತವಾಗಿ ಪ್ರದರ್ಶಿಸುವುದು ತಪ್ಪು. ಮಕ್ಕಳನ್ನು ರಾಜಕೀಯ ವಿಚಾರಗಳಿಂದ ದೂರವೇ ಇರಿಸಬೇಕು. ಮೋದಿಯಂತಹ ಅನಕ್ಷರಸ್ಥ ಮತ್ತು ಅಶಿಕ್ಷಿತ ವ್ಯಕ್ತಿಯ ಚಿತ್ರವನ್ನು ನೋಡುವುದರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ’ ಎಂದಿದ್ದಾರೆ.

‘ಪ್ರಧಾನಮಂತ್ರಿಗಳು ಎಷ್ಟು ಪದವಿಗಳನ್ನು ಹೊಂದಿದ್ದಾರೆ ಎಂದು ಮಕ್ಕಳು ಹಾಗೂ ಜನರಿಗೆ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಪದಗಳ ಆಯ್ಕೆಯ(‘ದಲಿತ’ ಪದ ಬಳಕೆ ವಿವಾದ) ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಪದ ಬಳಕೆ ವಿಚಾರವಾಗಿ ಆಡಳಿತ ಪಕ್ಷವು ಆಕ್ಷೇಪ ವ್ಯಕ್ತಪಡಿಸುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಮಂತ್ರಿ ದೇವರಲ್ಲ’ ಎಂದೂ ಹೇಳಿದ್ದಾರೆ.

ಈ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ವಕ್ತಾರೆ ಶೈನಾ ಎನ್‌.ಸಿ., ಸಂಜಯ್‌ ಅವರನ್ನು ಮಾನಸಿಕ ಅಸ್ವಸ್ಥ ಎಂದು ದೂರಿದ್ದಾರೆ.

‘ಮಾನಸಿಕ ಅಸ್ವಸ್ಥರಾದ ಸಂಜಯ್‌ ನಿರುಪಮ್‌ ಅವರಿಂದ ಮತ್ತೊಂದು ಅಸಹ್ಯಕರವಾದ ಹೇಳಿಕೆ ಹೊರಬಂದಿದೆ. ಮೋದಿ ಅವರು 125 ಕೋಟಿ ಭಾರತೀಯರಿಂದ ಆಯ್ಕೆಯಾಗಿದ್ದಾರೆ ಎಂಬುದನ್ನು ಬಹುಶಃಅವರು ಮರೆತಿರಬಹುದು. ಐಎನ್‌ಸಿಯು ಸಿದ್ಧಾಂತ ರಹಿತವಾದುದ್ದು. ನಾಗರಿಕರು 2019ರಲ್ಲಿ ಖಂಡಿತ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಸಂಸದ ಅನಿಲ್‌ ಶಿರೋಲ್‌, ‘ಪ್ರಧಾನಮಂತ್ರಿಯವರು ಒಂದು ಪಕ್ಷದ ಪ್ರತಿನಿಧಿಯಲ್ಲ. ಅವರು ದೇಶದ ಮತ್ತು ಜನರ ಪ್ರಧಾನಮಂತ್ರಿ. ಪ್ರಧಾನಿಗಳನ್ನು ಅವಮಾನಿಸುವ ಮೂಲಕ ದೇಶ, ಸಂವಿಧಾನ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಅವಮಾನಿಸಿದ್ದೀರಿ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.